March 17, 2025

ಮಂಗಳೂರಿನಲ್ಲಿ ನಡೆದ SDPI ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳು

0

ಮಂಗಳೂರು: ಜನವರಿ ಏಳರಂದು ಮಂಗಳೂರಿನ ಪುರಭವನದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ರವರ ಅದ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಎಂಟು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ನಿರ್ಣಯಗಳನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ನಿರಂತರವಾಗಿ ಸರಕಾರಗಳು ಮತ್ತು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಲು ಸಭೆ ಸರ್ವಾನುಮತದ ತೀರ್ಮಾನ ಕೈಗೊಂಡಿದೆ.

 

 

ನಿರ್ಣಯಗಳು:
1) ದಕ್ಷಿಣ ಕನ್ನಡ ಜಿಲ್ಲೆಯು ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಸುಂದರ ಪ್ರದೇಶವಾಗಿದೆ. ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ ಆದ್ದರಿಂದ ಸರಕಾರವು ಕರಾವಳಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ವಿಶೇಷ ಯೋಜನೆಗಳನ್ನು ರೂಪಿಸಬೇಕು. ಇದರಿಂದ ಜಿಲ್ಲೆಯ ಆರ್ಥಿಕತೆಯ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ ಆಗುತ್ತದೆ. ಯೋಜನೆಯ ಬಗ್ಗೆ ತಾಂತ್ರಿಕ ತಜ್ಞರಿಂದ ಸಲಹೆ ಪಡೆದು ಮೊದಲ ಹಂತದಲ್ಲಿ ಮುಂದಿನ ಬಜೆಟ್ನಲ್ಲಿ ಕನಿಷ್ಠ ಮೂರು ಸಾವಿರ ಕೋಟಿ ರೂಪಾಯಿಗಳನ್ನು ಈ ವಿಶೇಷ ಯೋಜನೆಗೆ ಮೀಸಲಿಡಬೇಕು.

2) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಹಾಗೂ ಜಯದೇವ ಹೃದ್ರೋಗ ಆಸ್ಪತೆಯ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು.

3) ದಕ್ಷಿಣ ಕನ್ನಡ ಜಿಲ್ಲೆಯು ಬೌಗೋಳಿಕವಾಗಿ ದೊಡ್ಡ ವ್ಯಾಪ್ತಿ ಹೊಂದಿರುತ್ತದೆ, ಆಡಳಿತಾತ್ಮಕ ಸುಲಭ ನಿರ್ವಹಣೆ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯನ್ನು ವಿಭಜಿಸಿ ಹೊಸ ಪುತ್ತೂರು ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಬೇಕು, ಸರಕಾರ ಹೊಸ ಜಿಲ್ಲಾ ಘೋಷಣೆಯನ್ನು ಕೂಡಲೇ ಮಾಡಬೇಕು.

4) ಮಂಗಳೂರಿನ ಖಾಸಗಿ ಆಸ್ಪತ್ರೆಗಳ ವಿರುದ್ಧ ಮೆಡಿಕಲ್ ಮಾಫಿಯಾ ಎಂಬ ಆರೋಪಗಳು ಕೇಳಿ ಬರುತ್ತಿದೆ. ಮೆಡಿಕಲ್ ಮಾಫಿಯಾ ಬಹಳ ಪ್ರಭಾವಿಯಾಗಿದ್ದು ಇದನ್ನು ನಿಯಂತ್ರಿಸಲು ಸರಕಾರ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತೀ ವೈದ್ಯರುಗಳು ಮತ್ತು ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಲ್ಯಾಬ್ ಗಳು ಸರಕಾರ ನಿಗದಿಪಡಿಸಿದ ಕನಿಷ್ಠ ದರ ಮತ್ತು ವೈದ್ಯರ ಕನ್ಸಲ್ಟೆನ್ಸಿ ಮೊತ್ತವನ್ನು ಮಾತ್ರ ರೋಗಿಗಳಿಂದ ಪಡೆಯಬೇಕು ಮತ್ತು ಈ ದರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು, ಇದನ್ನು ಸರಕಾರ ವಿಶೇಷವಾಗಿ ಪರಿಗಣಿಸಿ ಜಾರಿಗೆ ತರಬೇಕು.

5) ಗಾಂಜಾ ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಜಾಲವು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಪಾಯಕಾರಿಯಾಗಿ ವ್ಯಾಪಿಸುತ್ತಿದೆ, ಸಣ್ಣ ಪ್ರಾಯದಲ್ಲೇ ಮಕ್ಕಳು ಮಾದಕ ವ್ಯಸನಗಳ ದಾಸರಾಗುತ್ತಿದ್ದಾರೆ, ಸರಕಾರ ಮತ್ತು ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಮಾದಕ ವಸ್ತುಗಳ ಸಂಪೂರ್ಣ ನಿಯಂತ್ರಣಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಬೇಕು. ಪ್ರತೀ ಗ್ರಾಮ ಮಟ್ಟದಲ್ಲಿ ವಿಶೇಷ ಅಧಿಕಾರಿಗಳ ನೇತೃತ್ವದ ತಂಡವನ್ನು ನೇಮಿಸಿ ಮನೆ ಮನೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಜಾಗ್ರತಿ ಮೂಡಿಸಬೇಕು ಹಾಗೂ ಜಾಲದ ಹಿಂದಿರುವ ಪ್ರತಿಯೊಂದು ಪೆಡ್ಲರ್ ಗಳನ್ನು, ಪ್ರಭಾವಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು, ಇದಕ್ಕಾಗಿ ಸರಕಾರ ವಿಶೇಷ ಮಾದಕ ದ್ರವ್ಯಗಳ ನಿಯಂತ್ರಣಾ ಕಾಯಿದೆ ಜಾರಿಗೆ ತರಬೇಕು.

6) ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಮತ್ತು ಮಂಗಳೂರು ನಗರದಲ್ಲಿ ಸರಕಾರಿ ಬಸ್ಸು ಓಡಿಸಬೇಕು, ವಿಶೇಷವಾಗಿ ಉಳ್ಳಾಲ, ಮೂಡಬಿದ್ರೆ, ಮುಲ್ಕಿ ತಾಲೂಕುಗಳ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಸರಕಾರಿ ಬಸ್ಸುಗಳ ಓಡಾಟ ಪ್ರಾರಂಭಿಸಬೇಕು ಮತ್ತು ಖಾಸಗಿ ಬಸ್ಸುಗಳು ಕಡ್ಡಾಯವಾಗಿ ಬಸ್ಸುಗಳಲ್ಲಿ ಬಾಗಿಲು ಅಳವಡಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ದೇಶನ ಜಾರಿ ಮಾಡಬೇಕು.

7) ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದೆ, ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿ ಆರಂಭಿಸಿ ಈಗಾಗಲೇ ಮೂರು ವರ್ಷಗಳು ಕಳೆದಿದೆ, ವಾಹನ ಸವಾರರು ಕೆಸರು ಮತ್ತು ದೂಳಿನಿಂದ ಕೂಡಿದ ರಸ್ತೆಯಲ್ಲಿ ಜೀವಭಯದಿಂದ ಸಂಚಾರ ನಡೆಸುತ್ತಿದ್ದಾರೆ, ಇದನ್ನು ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಗರಿಷ್ಠ ಮೂರು ತಿಂಗಳ ಒಳಗಾಗಿ ಕಾಮಗಾರಿ ಪೂರ್ತಿ ಗೊಳಿಸಿ ಸಂಚಾರ ಯೋಗ್ಯವಾದ ರಸ್ತೆಯನ್ನು ಮಾಡಬೇಕು.

8) ಮಂಗಳೂರು ರೈಲ್ವೇ ವಲಯವು ಪಾಲಕ್ಕಾಡ್ ವಲಯದ ವ್ಯಾಪ್ತಿಗೆ ಬರುವ ಕಾರಣ ಇಲ್ಲಿ ಹೊಸ ಯೋಜನೆಗಳು ಗಗನ ಕುಸುಮವಾಗಿದೆ, ಆದ್ದರಿಂದ ಪಾಲಕ್ಕಾಡ್, ಮೈಸೂರ್ ಮತ್ತು ಕೊಂಕಣ್ ರೈಲ್ವೇಯನ್ನು ವಿಭಜಿಸಿ ಪ್ರತ್ಯೇಕ ಮಂಗಳೂರು ರೈಲ್ವೇ ಡಿವಿಜನ್ ಸ್ಥಾಪಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು.

Leave a Reply

Your email address will not be published. Required fields are marked *

error: Content is protected !!