ಮಂಗಳೂರು: ಮೆಡಿಕಲ್ ಶಾಪ್ ನಲ್ಲಿದ್ದ ಮಹಿಳಾ ಉದ್ಯೋಗಿಗೆ ಚೂರಿ ತೋರಿಸಿ ಹಣ ಸುಲಿಗೆ: ಆರೋಪಿಯ ಬಂಧನ

ಮಂಗಳೂರು: ನಗರದ ನಾಗುರಿ ಮೆಡಿಕಲ್ ಶಾಪ್ ನಲ್ಲಿದ್ದ ಮಹಿಳಾ ಉದ್ಯೋಗಿಗೆ ಚೂರಿಯನ್ನು ತೋರಿಸಿ, ಕೈಯಿಂದ ಹಲ್ಲೆಗೈದು ಹಾಡಹಗಲೇ ಶಾಪ್ ನ ಕ್ಯಾಶ್ ಡ್ರಾವರ್ ನಲ್ಲಿದ್ದ ರೂ. 19,300/- ನಗದು ಹಣವನ್ನು ಸುಲಿಗೆ ಮಾಡಿದ್ದ ಘಟನೆ ಡಿ.28ರಂದು ನಡೆದಿತ್ತು. ಪ್ರಕರಣ ಸಂಬಂಧಿಸಿ ಆರೋಪಿಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪತ್ತೆಯ ಬಗ್ಗೆ ತಂಡವನ್ನು ರಚಿಸಲಾಗಿತ್ತು. ಬೋಂದೆಲ್ ನಿವಾಸಿ ಸುನೀಲ್ (31) ಬಂಧಿತ ಆರೋಪಿಯಾಗಿದ್ದು ಆತನಿಂದ ಕಳವು ಮಾಡಿದ ರೂ. 17,500/- ನಗದು ಹಣವನ್ನು ಹಾಗೂ ಸುಲಿಗೆ ಮಾಡಲು ಬಳಸಿದ ಸ್ಕೂಟರ್ ಹಾಗೂ ಇತರೆ ಸೊತ್ತುಗಳನ್ನು ಸೇರಿಸಿ ಒಟ್ಟು ರೂ. 1,20,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಲಾಗಿದೆ.
ಕಂಕನಾಡಿ ನಗರ ಠಾಣೆಯ ನಿರೀಕ್ಷಕ ಟಿ.ಡಿ ನಾಗರಾಜ್ ನೇತೃತ್ವದಲ್ಲಿ ಪಿ.ಎಸ್.ಐ ವಿನಾಯಕ ಭಾವಿಕಟ್ಟಿ ಹಾಗೂ ಶಿವಕುಮಾರ್ ಮತ್ತು ಸಿಬ್ಬಂದಿಗಳಾದ ಜಯಾನಂದ, ಸಂದೀಪ್, ರಾಜೇಸಾಬ್, ಗಂಗಾಧರ್, ರಾಘವೇಂದ್ರ, ಪ್ರದೀಪ್ ಮತ್ತು ದಕ್ಷಿಣ ಉಪ ವಿಭಾಗ ಕಚೇರಿಯ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡಿದ್ದರು.