March 15, 2025

ಮಂಗಳೂರು: ಖಾಸಗಿ ಬಸ್‌ನಲ್ಲಿ l ಪ್ರಯಾಣಿಸುತ್ತಿದ್ದಾಗ ಮಹಿಳೆಗೆ ಕಚ್ಚಿದ ತಿಗಣೆ: ಮಹಿಳೆಗೆ 1.29 ಲಕ್ಷ ರೂ. ಪರಿಹಾರವಾಗಿ ನೀಡುವಂತೆ ಬಸ್‌ ಮಾಲಕರಿಗೆ ಆದೇಶ

0

ಮಂಗಳೂರು: ನಗರದಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರಿಗೆ ತಿಗಣೆ ಕಚ್ಚಿ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಮಹಿಳೆಗೆ 1.29 ಲಕ್ಷ ರೂ. ಅನ್ನು ಶೇ.6 ಬಡ್ಡಿ ವಿಧಿಸಿ ಪರಿಹಾರವಾಗಿ ನೀಡುವಂತೆ ಬಸ್‌ ಮಾಲಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಮಹಿಳೆ ನೀಡಿದ ದೂರನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಸೋಮಶೇಖರಪ್ಪ ಕೆ.ಹಂಡಿಗೋಲ್‌ ಮತ್ತು ಶಾರದಮ್ಮ ಎಚ್‌.ಜಿ. ಈ ಆದೇಶ ನೀಡಿದ್ದಾರೆ.
ಸೀ ಬರ್ಡ್‌ ಟೂರಿಸ್ಟ್‌ ಕೊಡಿಯಾಲ್‌ಬೈಲು ಮಂಗಳೂರು, ಸೀ ಬರ್ಡ್‌ ಟೂರಿಸ್ಟ್‌ ಬೆಂಗಳೂರು ಮತ್ತು ರೆಡ್‌ ಬಸ್‌ ಆನ್‌ಲೈನ್‌ ಆ್ಯಪ್‌ ವಿರುದ್ಧ ನಟ ಶೋಭರಾಜ್‌ ಪಾವೂರು ಪತ್ನಿ ಹಾಗೂ ಕಲಾವಿದೆ ದೀಪಿಕಾ ಸುವರ್ಣ ಆಯೋಗಕ್ಕೆ ದೂರು ನೀಡಿದ್ದರು. ಅವರ ಪರವಾಗಿ ಚಿದಾನಂದ ಕೆದಿಲಾಯ ವಾದಿಸಿದ್ದರು.

2022ರ ಆ.16ರಂದು ರಾತ್ರಿ ದೀಪಿಕಾ ಅವರಿಗೆ ಬಸ್‌ನಲ್ಲಿ ತಿಗಣೆ ಕಾಟ ನೀಡಿತ್ತು. ವಿಚಾರಣೆ ಕೈಗೆತ್ತಿಕೊಂಡ ಆಯೋಗವು ದೀಪಿಕಾ ಅವರಿಗೆ ಮೆಡಿಕಲ್‌ ಬಿಲ್‌ ಮೊತ್ತ 18,650 ರೂ. ಮತ್ತು ಶೇ.6ರ ವಾರ್ಷಿಕ ಬಡ್ಡಿ ಪಾವತಿಸಬೇಕು. ಬಸ್ಸಿನ ಟಿಕೆಟ್‌ನ ಮೊತ್ತ 840 ರೂ. ಜತೆ ದೂರು ನೀಡಿನ ದಿನಾಂಕದಿಂದ ಇಲ್ಲಿಯವರೆಗೆ ಶೇ.6ರ ವಾರ್ಷಿಕ ಬಡ್ಡಿಯೊಂದಿಗೆ ಮರು ಪಾವತಿಸಬೇಕು. ಮಾನಸಿಕ ಕಿರಿಕಿರಿ, ಆರ್ಥಿಕ ನಷ್ಟ ಮತ್ತು ಇತರ ಕಾರಣಗಳಿಗಾಗಿ 1 ಲಕ್ಷ ರೂ. ಮತ್ತು ಶೇ.6ರ ಬಡ್ಡಿ ಪಾವತಿಸಬೇಕು. ದೂರು, ವ್ಯಾಜ್ಯದ ಮೊತ್ತವಾಗಿ 10 ಸಾವಿರ ರೂ. ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

 

45 ದಿನದಲ್ಲಿ ಈ ಮೊತ್ತವನ್ನು ಪಾವತಿ ಮಾಡದಿದ್ದಲ್ಲಿ ಶೇ.8 ಹೆಚ್ಚುವರಿ ಬಡ್ಡಿಯೊಂದಿಗೆ ಪಾವತಿ ಮಾಡಬೇಕು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಿವಿಲ್‌ ಅಥವಾ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!