March 15, 2025

ಉಳ್ಳಾಲ: ಸಮುದ್ರದಲ್ಲಿ ಮುಳುಗಿ ವ್ಯಕ್ತಿ ಮೃತ್ಯು: ಸಹೋದರನ ಮಗಳನ್ನು ರಕ್ಷಿಸಲು ಹೋಗಿ ಅಲೆಗಳಿಗೆ ಸಿಲುಕಿ ನಡೆದ ಘಟನೆ

0

ಉಳ್ಳಾಲ: ಸಮುದ್ರ ಕಿನಾರೆಗೆ ತೆರಳಿದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸೋಮೇಶ್ವರ ಬಳಿ ರವಿವಾರ ನಡೆದಿದೆ.

ಬೆಂಗಳೂರಿನ ಶಿವಾಜಿನಗರದ ಹೆಚ್.ಪಿ.ಕೆ ರೋಡ್ ನಿವಾಸಿ ಕೆ.ಎಮ್. ಸಜ್ಜದ್ ಆಲಿ (45) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.

ಬೆಂಗಳೂರು ಮೂಲದ 11 ಮಂದಿಯ ಕುಟುಂಬ ಸುತ್ತಾಡುತ್ತಾ ರವಿವಾರ ಮಂಗಳೂರಿಗೆ ತಲುಪಿದ್ದರು. ಉಳ್ಳಾಲ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ಸೋಮೇಶ್ವರ ಬೀಚ್ ಗೆ ತೆರಳಿದ್ದಾರೆ. ಈ ವೇಳೆ ಸಜ್ಜಾದ್ ಅವರ ಸಹೋದರನ ಮಗಳು ನೀರು ಪಾಲಾಗಿದ್ದು, ಆಕೆಯನ್ನು ರಕ್ಷಣೆ ಮಾಡಲು ಸಜ್ಜಾದ್ ಅಲಿ ತೆರಳಿದ್ದು ಈ ವೇಳೆ ಅವರು ಸಮುದ್ರ ಪಾಲಾಗಿ ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದು ಬಂದಿದೆ. ತಕ್ಷಣ ಅವರನ್ನು ಮೇಲಕ್ಕೆತ್ತಿದ ಕುಟುಂಬಸ್ಥರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿದ ವೈದ್ಯರು ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಅವರು ಪಡೀಲ್ ನಲ್ಲಿ ನಡೆದಿದ್ದ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿ 11 ಮಂದಿ ಕುಟುಂಬಿಕರು ಸೋಮೇಶ್ವರ ಸಮುದ್ರ ತೀರದಲ್ಲಿ ವಿಹಾರಕ್ಕೆಂದು ಆಗಮಿಸಿದ್ದರು. 2015 ರಲ್ಲಿ ಪುತ್ತೂರು ನಿವಾಸಿ ಆಲಿಮಾ ರಶೀದಾ ಎಂಬವರನ್ನು ವಿವಾಹವಾಗಿದ್ದರು. ಬೆಂಗಳೂರಿನಲ್ಲೇ ನೆಲೆಸಿದ್ದ ಕುಟುಂಬ ಕಳೆದ ನಾಲ್ಕು ವರ್ಷಗಳಿಂದ ಪುತ್ತೂರಿನ ಬನ್ನೂರು ಬಾಡಿಗೆ ಫ್ಲ್ಯಾಟ್ ನಲ್ಲಿ ನೆಲೆಸಿದ್ದರು. ಮೃತರು ತಾಯಿ ಸಾಜಿದಾ ಬೇಗಂ, ಪತ್ನಿ ಹಾಗೂ ಮಕ್ಕಳಾದ ಕೈರಾ ಫೈಜಾ, ಹಮ್ಜಾನ್ ಆಲಿ, ಹುಸೈನ್ ಆಲಿ ಅವರನ್ನು ಅಗಲಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!