ದಕ್ಷಿಣ ಕೊರಿಯಾ: ಲ್ಯಾಂಡಿಂಗ್ ವೇಳೆ ವಿಮಾನ ಪತನ: ಸಾವಿನ ಸಂಖ್ಯೆ 179ಕ್ಕೆ ಏರಿಕೆ, 2 ಮಂದಿ ಪಾರು

ದಕ್ಷಿಣ ಕೊರಿಯಾ: ಮುವಾನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ 181 ಜನರಿದ್ದ ವಿಮಾನವೊಂದು ಪತನಗೊಂಡಿತ್ತು. ಘಟನೆಯಲ್ಲಿ ಮೃತರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ. 181 ಜನರಿದ್ದ ವಿಮಾನದಲ್ಲಿ ಇಬ್ಬರು ಬದುಕುಳಿದಿದ್ದಾರೆ ಎಂದು ವರದಿಯಾಗಿದೆ.
ಜೆಜು ಏರ್ ಫ್ಲೈಟ್ 2216 ಥೈಲ್ಯಾಂಡ್ ನಿಂದ ಹಿಂದಿರುಗುತ್ತಿದ್ದಾಗ, ದಕ್ಷಿಣ ಜಿಯೋಲ್ಲಾ ಪ್ರಾಂತ್ಯದಲ್ಲಿ ಪತನವಾಗಿದೆ. ವಿಮಾನದಲ್ಲಿದ್ದ 181 ಮಂದಿಯಲ್ಲಿ 175 ಮಂದಿ ಪ್ರಯಾಣಿಕರು ಮತ್ತು ಆರು ಮಂದಿ ಸಿಬ್ಬಂದಿಗಳು ಸೇರಿದ್ದರು. ವಿಮಾನ ಪಕ್ಷಿಗಳಿಗೆ ಢಿಕ್ಕಿ ಹೊಡೆದ ಕಾರಣ ಲ್ಯಾಂಡಿಂಗ್ ಗೇರ್ ವೈಫಲ್ಯವಾಗಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಹೇಳಲಾಗಿದೆ.
ಕೆನಡಾ ವಿಮಾನ ಅಪಘಾತ:
ಕೆನಡಾದ ಹ್ಯಾಲಿಫ್ಯಾಕ್ಸ್ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇಯಿಂದ ಜಾರಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯ ಭಯಾನಕ ದೃಶ್ಯವು ವೈರಲ್ ಆಗಿದೆ.
ಸೇಂಟ್ ಜಾನ್ಸ್ ನಿಂದ ಬರುತ್ತಿದ್ದ ‘ಏರ್ ಕೆನಡಾ ವಿಮಾನ 2259’ ಲ್ಯಾಂಡಿಂಗ್ ಗೆ ಮೊದಲು ರನ್ ವೇಯಿಂದ ಕೆಳಕ್ಕೆ ಜಾರಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ವಿಮಾನದ ಲ್ಯಾಂಡಿಂಗ್ ವೇಳೆ ಗೇರ್ ವೈಫಲ್ಯದಿಂದಾಗಿ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ರಕ್ಷಣಾ ಸಿಬ್ಬಂದಿಗಳು ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಝರಬೈಜಾನ್ ವಿಮಾನ ಅಪಘಾತ:
67 ಮಂದಿ ಪ್ರಯಾಣಿಸುತ್ತಿದ್ದ ಅಝರ್‌ಬೈಝಾನ್‌ನ ವಿಮಾನವೊಂದು ಕ್ರಿಸ್‌ಮಸ್ ದಿನದಂದು ಕಝಕಿಸ್ತಾನದಲ್ಲಿ ಪತನಗೊಂಡಿತ್ತು. ಈ ವಿಮಾನವು ಅಝುರ್‌ಬೈಜಾನ್ ರಾಜಧಾನಿ ಬಾಕುವಿನಿಂದ ರಶ್ಯದ ಚೆಚೆನ್ಯ ಪ್ರಾಂತದ ರಾಜಧಾನಿ ಗ್ರೊಝ್ನಿಗೆ ಪ್ರಯಾಣಿಸುತ್ತಿದ್ದಾಗ ಅದು ಪತನಗೊಂಡಿತ್ತು. ಈ ದುರಂತದಲ್ಲಿ ಕನಿಷ್ಠ 38 ಜನರು ಸಾವನ್ನಪ್ಪಿದ್ದಾರೆ ಮತ್ತು 29 ಜನರು ಬದುಕುಳಿದಿದ್ದಾರೆ.
ನಾರ್ವೆ ವಿಮಾನ ಅಪಘಾತ:
ತುರ್ತು ಭೂಸ್ಪರ್ಶ ಮಾಡಿದ್ದ ವಿಮಾನವೊಂದು ರನ್ ವೇ ಬಿಟ್ಟು ಪಕ್ಕದ ಹುಲ್ಲಿನ ಹಾಸಿನ ಬದಿಗೆ ಜಾರಿದ ಘಟನೆ ನಾರ್ವೆಯ ಓಸ್ಲೋ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ 182 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
KLM ರಾಯಲ್ ಡಚ್ ಏರ್ ಲೈನ್ಸ್ ವಿಮಾನವು ನಾರ್ವೆಯ ಓಸ್ಲೋ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಹೈಡ್ರಾಲಿಕ್ ವೈಫಲ್ಯ ಕಂಡು ಬಂದ ಹಿನ್ನೆಲೆ ನಾರ್ವೆಯ ಸ್ಯಾಂಡೆಫ್ ಜೋರ್ಡ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಈ ವೇಳೆ ವಿಮಾನವು ರನ್ ವೇಯಿಂದ ಜಾರಿದೆ ಎಂದು ವರದಿಯಾಗಿದೆ.