5ನೇ ವರ್ಷಕ್ಕೆ ಹಸಿವು ನೀಗಿಸುವ ಕಾಯಕ
ಅಲ್ಲಿ ಹಸಿವಿತ್ತು. ತುತ್ತು ಅನ್ನಕ್ಕಾಗಿ ಪರದಾಟವಿತ್ತು. ರಾಜ್ಯದ ಹತ್ತೆನ್ನರಡು ಜಿಲ್ಲೆಗಳ ಬಡವರು ಅದೇ ಕೇಂದ್ರವನ್ನು ಆಶ್ರಯಿಸುತ್ತಿದ್ದಾರೆ. ಇಲ್ಲಿ ಬಂದರೆ ಪರಿಹಾರವಿದೆ ಎಂಬ ನಂಬಿಕೆ ಇದೆ. ಉತ್ತಮ ವೈದ್ಯರು, ಸಿಬ್ಬಂದಿಗಳು, ಚಿಕಿತ್ಸೆ ಎಲ್ಲವೂ ಇತರ ಜಿಲ್ಲಾ ಸರಕಾರಿ ಆಸ್ಪತ್ರೆಗಳಿಗಿಂತ ಮಂಗಳೂರಿನ ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಎಂಬ ಅಭಿಪ್ರಾಯ ಬಹುತೇಕ ಜನರದ್ದು. ಸುಮಾರು ಸಾವಿರ ಹಾಸಿಗೆಗಳಿರುವ ವೆನ್ಲಾಕ್ ಆಸ್ಪತ್ರೆಗೆ ಬರುವ ರೋಗಿಗಳು ಆರ್ಥಿಕ ಸಾಮರ್ಥ್ಯವಿಲ್ಲದ ತೀರಾ ಅಶಕ್ತರು. ಬಿಜಾಪುರ, ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ, ಶಿವಮೊಗ್ಗ, ಗದಗ, ಹಾವೇರಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ, ಕಾಸರಗೋಡು ಮೊದಲಾದ ಕಡೆಯಿಂದ ಸಹಸ್ರಾರು ರೋಗಿಗಳು ತುರ್ತು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆ ಸೇರುತ್ತಾರೆ. ಸರಕಾರ ರೋಗಿಗಳಿಗೆ ಅನ್ನಾಹಾರ ನೀಡುತ್ತದೆ. ಆದರೆ ರೋಗಿಗಳ ಸಹಾಯಕರು ರೋಗಿಗಳ ಆಹಾರವನ್ನೇ ಹಂಚಿ ತಿನ್ನುವುದು ಅಥವಾ ರಸ್ತೆಬದಿ ಬೇಡಿ ತಿನ್ನುವ ಶೋಚನೀಯ ಅವಸ್ಥೆಯನ್ನು ಮನಗಂಡ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ 2017 ಡಿಸೆಂಬರ್ 18 ರಿಂದ ರಾತ್ರಿಯ ಭೋಜನದ ವ್ಯವಸ್ಥೆ ಕಾರುಣ್ಯ ಯೋಜನೆಯನ್ನು ತಾತ್ಕಾಲಿಕ ಎಂಬಂತೆ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಾರಂಭಿಸಿತು.
ಎಂ.ಫ್ರೆಂಡ್ಸ್ ನ ಸದಸ್ಯರು 3 ತಿಂಗಳಿಗೆ ಅಗತ್ಯವಿರುವ 6 ಲಕ್ಷ 75 ಸಾವಿರ ರೂ. ಕ್ರೋಢೀಕರಿಸಿ ಆರಂಭಿಸಿದ ವೆನ್ಲಾಕ್ ಕಾರುಣ್ಯ ಯೋಜನೆ ಸೃಷ್ಟಿಕರ್ತನ ಅಪಾರ ಅನುಗ್ರಹ ಹಾಗೂ ಸಹೃದಯೀ ದಾನಿಗಳ ಪ್ರೋತ್ಸಾಹದಿಂದ 4 ವರ್ಷವನ್ನು ಪೂರೈಸಿ 5ನೇ ವರ್ಷದತ್ತ ಮುಂದಡಿ ಇಟ್ಟಿದೆ. ಕೋವಿಡ್ ಲಾಕ್ ಡೌನ್, ಗಲಭೆ, ಕರ್ಫ್ಯೂ, ಅಘೋಷಿತ ಬಂದ್, ಸೆಕ್ಷನ್ ಏನೇ ಇದ್ದರೂ ಒಂದು ದಿನವೂ ಬಿಡದೇ ಪ್ರತಿನಿತ್ಯ 500 ಮಂದಿಯ ಆಹಾರ ತಯಾರಿಸಿ ಖುದ್ದು ನಿಂತು ಹಂಚುತ್ತಾ ಬಂದಿದೆ. ತಿಂಗಳಿಗೆ ಸುಮಾರು ಎರಡೂ ಕಾಲು ಲಕ್ಷ ರೂ. ಖರ್ಚಾಗುತ್ತಿದ್ದರೂ 4 ವರ್ಷದಲ್ಲಿ ಒಮ್ಮೆಯೂ ಕೂಡಾ ಎಂ.ಫ್ರೆಂಡ್ಸ್ ನ ಬ್ಯಾಂಕ್ ಖಾತೆಯಲ್ಲಿ ಹಣ ಉಳಿತಾಯವಾದದ್ದಿಲ್ಲ. ಹಣ ಇದ್ದರೂ, ಇಲ್ಲದೇ ಇದ್ದರೂ ಕಾರುಣ್ಯ ಯೋಜನೆಯನ್ನು ಒಂದು ದಿನವೂ ನಿಲ್ಲಿಸಿಲ್ಲ. ಜೊತೆಗೆ ಆಸ್ಪತ್ರೆಯ ರೋಗಿಗಳಿಂದ ಬರುವ ಬೇಡಿಕೆಗಳಾದ ಔಷಧಿ, ವ್ಹೀಲ್ ಚೆಯರ್, ವಾಕರ್, ಸಿಟಿ ಸ್ಕ್ಯಾನ್, ಊರಿಗೆ ತಲುಪಿಸುವ ಆಂಬುಲೆನ್ಸ್ ವ್ಯವಸ್ಥೆ, ಅನಾಥ ಶವ ಸಂಸ್ಕಾರ, ಆರ್ಥಿಕ ಸಹಾಯ ಮೊದಲಾದವನ್ನು ಕೂಡಾ ಎಂ.ಫ್ರೆಂಡ್ಸ್ ತಂಡ ಪೂರೈಸಿದೆ.
ವೆನ್ಲಾಕ್ ಆಸ್ಪತ್ರೆಗೆ ಶುದ್ಧ ನೀರಿನ ಘಟಕ, ವಾಕರ್, ಬೆಡ್ ಶೀಟ್, ಮಾಸ್ಕ್, ಸ್ಯಾನಿಟೈಸರ್ ಮೊದಲಾದವನ್ನು ವಿತರಿಸಿದೆ. ಕಳೆದ 4 ವರ್ಷ ಅಂದರೆ 1,460 ದಿನಗಳಲ್ಲಿ 6 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಎಂ.ಫ್ರೆಂಡ್ಸ್ ಕಾರುಣ್ಯ ಯೋಜನೆಯಿಂದ ಹಸಿದ ಹೊಟ್ಟೆಯನ್ನು ತುಂಬಿಸಿಕೊಂಡಿದ್ದಾರೆ. ಈ ಯೋಜನೆಗಾಗಿ ಈಗಾಗಲೇ 1 ಕೊಟಿ 10 ಲಕ್ಷ ರೂಪಾಯಿಯನ್ನು ವ್ಯಯಿಸಲಾಗಿದೆ. ಕೆಲವು ತುರ್ತು ಸಂದರ್ಭಗಳಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲದೇ ಲೇಡಿಗೋಶನ್ ಆಸ್ಪತ್ರೆ ಹಾಗೂ ಅತ್ತಾವರ ಕೆಎಂಸಿ ಆಸ್ಪತ್ರೆಯ ರೋಗಿಗಳ ಜೊತೆಗಾರರಿಗೆ ತಿಂಗಳುಗಟ್ಟಲೆ ಆಹಾರ ಹಂಚಿ ಹಸಿವುಮುಕ್ತ ಸಮಾಜಕ್ಕಾಗಿ ಸ್ಪಂದಿಸಲಾಗಿದೆ.
ಕ್ವಾಲಿಟಿ ಮತ್ತು ಕ್ವಾಂಟಿಟಿಯಲ್ಲಿ ರಾಜಿ ಮಾಡದೇ ಉತ್ತಮ ದರ್ಜೆಯ ಆಹಾರವನ್ನೇ ರೋಗಿಗಳ ಜೊತೆಗಾರರಿಗೆ ನೀಡಲಾಗಿದೆ. ಆಹಾರವನ್ನು ಪಡೆಯುವಾಗ ಅವರ ಕಣ್ಣಲ್ಲಿ ಕಾಣುವ ಆನಂದಬಾಷ್ಪದ ಹಬ್ಬ ವರ್ಣನಾತೀತ. ಆಹಾರ ಕೊಟ್ಟವರಿಗಾಗಿ ಹಸಿದ ಒಣ ತುಟಿಗಳು ಮಾಡುವ ಪ್ರಾರ್ಥನೆಗೆ ಮರುಗಿದ್ದೇವೆ. ಆಹಾರ ಯೋಗ್ಯರಿಗೆ ತಲುಪುವ ಫಲವೋ ಏನೋ ದೇವನು ಈತನಕ ಈ ಯೋಜನೆಯನ್ನು ಬರಿದು ಮಾಡಿಲ್ಲ. ನಿಲ್ಲಿಸಿಲ್ಲ. ಹಣವಿಲ್ಲದಿದ್ದರೂ ಮುಂದುವರಿದಿದೆ, ಮುಂದುವರಿಯುತ್ತಿದೆ. ಕೆಲವೊಮ್ಮೆ ಸಾಲ ಮಾಡಿಯೂ ಯೋಜನೆ ನಡೆದಿದೆ. ಈಗಲೂ ಆರ್ಥಿಕ ಸಮಸ್ಯೆ ಎದುರಾದರೂ ಕಾರುಣ್ಯದ ಕಡಲಿಗೆ ಬರವಿಲ್ಲ. ಈತನಕ ಹಾಗೂ ಮುಂದಿನ ದಿನಗಳಲ್ಲೂ ನಮ್ಮ ಜೊತೆ ಸಹಕರಿಸುವ ಸರ್ವ ದಾನಿಗಳಿಗೂ ಸೃಷ್ಟಿಕರ್ತನ ಅನುಗ್ರಹ ಇರಲಿ. ನಿಮಗೂ ಒಂದೊತ್ತಿನ ಹೊಟ್ಟೆ ತಣಿಸುವ ಕಾಯಕದಲ್ಲಿ ಆಸಕ್ತಿ ಇದ್ದರೆ ಒಂದು ದಿನದ ಖರ್ಚು 8,000/- ನೀಡಬಹುದು. ನಿಮ್ಮ ಅಥವಾ ನಿಮ್ಮವರ ಬರ್ತ್’ಡೇ, ಎನಿವರ್ಸರಿ, ಇತರ ಸ್ಮರಣಾರ್ಥ ಕಾರ್ಯಕ್ರಮ, ವಿಶೇಷ ದಿನಗಳನ್ನು ಅಶಕ್ತರಿಗೆ ಆಹಾರ ನೀಡುವ ಮೂಲಕ ಆಚರಿಸಬಹುದು. ಯಾವ ಸಮಯದಲ್ಲಿ ಬೇಕಾದರೂ ನೀವು ಭಾಗವಹಿಸಿ ಖುದ್ದು ನಿಮ್ಮ ಕೈಯ್ಯಲ್ಲೇ ಆಹಾರ ನೀಡಬಹುದು. ಎಂ.ಫ್ರೆಂಡ್ಸ್ ಕಾರುಣ್ಯ ಯೋಜನೆಗೆ ಸದಸ್ಯರಾಗಿ ಮುಂದುವರಿಯಲು ವಾರ್ಷಿಕ 6,000/- ಅಥವಾ ಮಾಸಿಕ 500/- ರೂ. ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 9980880860 (ಅಧ್ಯಕ್ಷರು), 9741993313 (ಪ್ರಧಾನ ಕಾರ್ಯದರ್ಶಿ), 9448500874 (ಕೋಶಾಧಿಕಾರಿ) ಅಥವಾ ನಮ್ಮ ಸದಸ್ಯರನ್ನು ಸಂಪರ್ಕಿಸಬಹುದು. ನಮ್ಮ ಬ್ಯಾಂಕ್ ಖಾತೆ: M FRIENDS CHARITABLE TRUST, A/C No: 3058101003352, Canara Bank Vittal, IFSC : CNRB0003058. (ನಮ್ಮ ಸಂಸ್ಥೆ 12AA, 80G ಮಾನ್ಯತೆ ಪಡೆದಿದೆ.) ನಿಮ್ಮ ಕಿಂಚಿತ್ ಸಹಕಾರ ಅದೆಷ್ಟೋ ಹೃದಯಗಳನ್ನು ಗೆಲ್ಲಬಹುದು. ಹೊಟ್ಟೆ ತುಂಬಿಸಿದ ಅಶಕ್ತರ ಪ್ರಾರ್ಥನೆಯು ಪುಣ್ಯ ಮಾರ್ಗಕ್ಕೆ ಸೇತುವಾಗಬಹುದು. ನಿಮಗೆ ಈ ಸೇವೆ ಇಷ್ಟವಾಗಿದ್ದರೆ Back ಬಟನ್ ಪ್ರೆಸ್ ಮಾಡದೇ ಫಾರ್ವರ್ಡ್ ಮಾಡುವ ಮೂಲಕ ಈ ಸಂದೇಶವನ್ನು ಮತ್ತೊಬ್ಬರಿಗೆ ತಲುಪಿಸಿ ಸಹಕರಿಸಿ.
-ವಂದನೆಗಳೊಂದಿಗೆ;
ರಶೀದ್ ವಿಟ್ಲ,
ಪ್ರ. ಕಾರ್ಯದರ್ಶಿ,
ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.)
ಮಂಗಳೂರು.
ಮೊ: 9741993313




