ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತ ಆತ್ಮಹತ್ಯೆ
ಶಬರಿಮಲೆ: ಕರ್ನಾಟಕದ ಕನಕಪುರದ ಅಯ್ಯಪ್ಪ ಭಕ್ತ ಶಬರಿಮಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಬರಿಮಲೆ ದೇಗುಲದ ಸ್ಕೈವಾಕ್ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾವನಪ್ಪಿದವರನ್ನು ಕನಕಪುರದ ಮದ್ದೂರಮ್ಮ ಬೀದಿ ನಿವಾಸಿ ಕುಮಾರ್ (40) ಎಂದು ಗುರುತಿಸಲಾಗಿದೆ. ಮೃತ ಕುಮಾರ್ ಗಾರೆ ಕೆಲಸ ಮಾಡಿಕೊಂಡಿದ್ದರು. ಮೂರು ದಿನದ ಹಿಂದೆ ಕುಮಾರ್ ಸೇರಿ 6 ಮಂದಿ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಪಡೆದ ಬಳಿಕ ದೇವಾಲಯದ ಸ್ಕೈವಾಕ್ ಶೆಲ್ಟರ್ ಮೇಲಿನಿಂದ ಜಿಗಿದು ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಮಾರ್ ಅವರು ಸಂಜೆ 6:30 ರ ಸುಮಾರಿಗೆ ಫ್ಲೈಓವರ್‌ನ ಶೀಟ್ ಛಾವಣಿಯಿಂದ ಸುಮಾರು 20 ಅಡಿ ಎತ್ತರದಿಂದ ಜಿಗಿದಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ಅವರ ಕಾಲು ಮತ್ತು ಕೈಗೆ ಗಂಭೀರಗಾಯಗಳಾಗಿತ್ತು, ಕೂಡಲೇ ಅವರನ್ನು ಶಬರಿಮಲೆಯಲ್ಲಿರುವ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು, ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಸಾಗಿಸುವಾಗ, ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಕೊಟ್ಟಾಯಂನ ಕಂಜಿರಪಲ್ಲಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸಾವು ದೃಢಪಟ್ಟಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಶಬರಿಮಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕುಮಾರ್ ಕುಟುಂಬಸ್ಥರು ಶಬರಿಮಲೆಗೆ ತೆರಳಿದ್ದಾರೆ.