ಮಂಗಳೂರಿನಲ್ಲಿ ಪಿ ಎಫ್ ಐ ಎಸ್ಪಿ ಕಚೇರಿ ಚಲೋ ಕಾರ್ಯಕ್ರಮ:
ಬ್ಯಾರಿ ಕೇಡ್ ಗಳನ್ನು ಇಟ್ಟು ಕಾರ್ಯಕರ್ತರನ್ನು ತಡೆದ ಪೊಲೀಸರು
ಮಂಗಳೂರು: ಉಪ್ಪಿನಂಗಡಿಯಲ್ಲಿ ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಪಿಎಫ್ ಐ ಕರೆ ನೀಡಿದ್ದ ಎಸ್ಪಿ ಚಲೋ ಮಂಗಳೂರಿನ ಕ್ಲಾಕ್ ಟವರ್ ಬಳಿಯಿಂದ ಆರಂಭಗೊಂಡು ಎಸ್.ಪಿ.ಕಚೇರಿಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಪೊಲೀಸರು ಬ್ಯಾರಿ ಕೇಡ್ ಗಳನ್ನು ಇಟ್ಟು ತಡೆದರು. ಇದರಿಂದ ಪ್ರತಿಭಟನಕಾರರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಆರಂಭಿಸಿ, ಘೋಷಣೆ ಕೂಗಿದರು.
ಕ್ಲಾಕ್ ಟವರ್ ರಸ್ತೆಯಿಂದ ಆರಂಭವಾದ ಪ್ರತಿಭಟನೆಗೆ ಪೊಲೀಸರು ಬ್ಯಾರಿತೇಡ್ ಮೂಲಕ ತಡೆಯೊಡ್ಡಿದರೂ, ಪ್ರತಿಭಟನೆಕಾರರು ರಸ್ತೆಯಲ್ಲೇ ಕುಳಿತು ಎಸ್ಪಿ ಮತ್ತು ಡಿಜಿಪಿ ಬರುವ ವರೆಗೂ ಇಲ್ಲಿಂದ ಕದಲಲ್ಲ ಎಂದು ಪ್ರತಿಭಟನೆ ಮುಂದುವರೆಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಧಾರ್ಮಿಕ ವಿದ್ವಾಂಸ ಆತೂರ್ ತಂಙಳ್ ಪ್ರತಿಭಟನೆಗೆ ಬಂದು ಪ್ರತಿಭಾಟನಾಕಾರರೊಂದಿಗೆ ಸೇರಿಕೊಂಡರು.
ಜಿಲ್ಲೆಯ ಮೂಲೆಮೂಲೆಗಳಿಂದ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಕಾರರು ಮಂಗಳೂರಿಗೆ ಆಗಮಿಸಿದ್ದು, ಪ್ರತಿಭಟನೆಯ ಕಾವು ಹೆಚ್ಚಾಗಿದೆ.
ಎಸ್.ಪಿ.ಕಚೇರಿ ಚಲೋ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು,ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಮಂಗಳೂರು ನಗರದ ಹಂಪನಕಟ್ಟೆ, ಕ್ಲಾಕ್ ಟವರ್ , ಸ್ಟೇಟ್ ಬ್ಯಾಂಕ್ ಪ್ರದೇಶಗಳಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದೆ.
ಹಂಪನ ಕಟ್ಟೆ ಮತ್ತು ಸುತ್ತಮುತ್ತಲ ಪ್ರಮುಖ ರಸ್ತೆಗಳನ್ನು ಪೊಲೀಸರು ತಾತ್ಕಾಲಿಕವಾಗಿ ಮುಚ್ಚಿದ್ದಾರೆ. ಹೆದ್ದಾರಿಯಲ್ಲಿ ಕುಳಿತ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದರು. ಈ ಸಂದರ್ಭ ಮಾತನಾಡಿ ಶಾಫಿ ಬೆಳ್ಳಾರೆ ಅವರು ಪೊಲೀಸರ ಲಾಠಿ ಏಟಿಗೆ ಬಗ್ಗುವವರು ನಾವಲ್ಲ. ಪೊಲೀಸರು ಆತೂರು ತಂಙಳ್ ಅವರ ಮೇಲೆ ದಾಳಿ ನಡೆಸಿದ್ದಾರೆ. ಪ್ರವಾದಿ ಕುಟುಂಬದ ತಂಙಳ್ ರ ರಕ್ತ ನೆಲಕ್ಕೆ ಸುರಿಯುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನುಷ್ಟು ಹೋರಾಟ ನಡೆಯಲಿದೆ ಎಂದರು.






