ವಿಟ್ಲ: ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ದಾಂಧಲೆ ಪ್ರಕರಣ: ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಸರಕಾರಿ ನೌಕರರ ಸಂಘದಿಂದ ಮನವಿ
ಬಂಟ್ವಾಳ: ಕಂದಾಯ ನಿರೀಕ್ಷಕರ ಕಚೇರಿಗೆ ಒಳನುಗ್ಗಿ ಕಂದಾಯ ನಿರೀಕ್ಷಕರನ್ನು ಅವಾವ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿ ಕಚೇರಿಯ ಸೊತ್ತುಗಳಿಗೆ ಹಾನಿ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ವತಿಯಿಂದ ತಾಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ವಿಟ್ಲ ಕಂದಾಯ ನಿರೀಕ್ಷಕರಾಗಿರುವ ಪ್ರಶಾಂತ್ ಶೆಟ್ಟಿಯವರು ನ. 11 ರಂದು ತಮ್ಮ ಕಚೇರಿಯಲ್ಲಿ ಕರ್ತವ್ಯದಲ್ಲಿರುವಾದ ವೀರಕಂಭ ಗ್ರಾಮದ ಹರೀಶ್ ರೈ ಕಲ್ಮಲೆ ಮತ್ತು ಧನಂಜಯ ಎಂಬ ವ್ಯಕ್ತಿಗಳು ಅಕ್ರಮವಾಗಿ ಅವರ ಕಚೇರಿಗೆ ಒಳನುಗ್ಗಿರುತ್ತಾರೆ. 94 ಸಿ ಹಕ್ಕು ಪತ್ರ ಕಡತ ಸಂಖ್ಯೆ HSR :16/2021-22 ರ ಬಗ್ಗೆ ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಶಿಫಾರಸ್ಸು ಮಾಡಲು ನೀವು ಕಾರಣಿಕರ್ತರು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಘಟನೆಯಿಂದ ಸರ್ಕಾರಿ ನೌಕರರ ಮನೋಸ್ಥೆರ್ಯ ಕುಂದಿದ್ದು, ಕಚೇರಿಯಲ್ಲಿ ಕೆಲಸ ಮಾಡಿ ಹೆದರುವಂತಹ ಪರಿಸ್ಥಿತಿ, ಭಯದಲ್ಲೇ ಕರ್ತವ್ಯ ನಿರ್ವಹಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕೇಸು ದಾಖಲಾದ ಮರುದಿನವೇ ಆರೋಪಿಗಳಲ್ಲಿ ಒಬ್ಬರಾದ ಹರೀಶ್ ರೈ ಕಲ್ಮಲೆ ಎಂಬ ವ್ಯಕ್ತಿಯೂ ಬಂಟ್ವಾಳ ಮಿನಿ ವಿಧಾನ ಸೌಧದ ತಹಶೀಲ್ದಾರ್ ಕಚೇರಿಯಲ್ಲಿ ಇರುವ ಶಿರಸ್ತೇದಾರರಾದ ದಿವಾಕರ್ ಮುಗುಳ್ಳ ಇವರ ಕಚೇರಿಗೆ ಆಕ್ರಮವಾಗಿ ಪ್ರವೇಶಿಸಿ ದಿನಾಂಕ 11.11.2024 ರಂದು ವಿಟ್ಲ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ನಡೆದ ಪ್ರಕರಣದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ತಾವು ಕುಮ್ಮಕ್ಕು ನೀಡಿದ್ದೀರಿ ಎಂದು ಆರೋಪಿಸಿ ಏರು ಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆವರಿಗೆ ಬೆದರಿಕೆ ಹಾಕಿರುತ್ತಾರೆ.
ಆರೋಪಿಗಳಾದ ಹರೀಶ್ ರೈ ಕಲ್ಮಲೆ ಮತ್ತು ಧನಂಜಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಹರೀಶ್ ರೈ ಕಲ್ಮಲೆ ಹಾಗೂ ಧನಂಜಯ ವೀರಕಂಭ ಇವರನ್ನು ಕೂಡಲೇ ಬಂಧಿಸುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರು ಭಯ ಮುಕ್ತ ವಾತಾವಾರಣದಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವಂತೆ ಸಮಸ್ತ ಬಂಟ್ವಾಳ ತಾಲೂಕು ಸರ್ಕಾರಿ ನೌಕರರ ಪರವಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಮನವಿ ಸಲ್ಲಿಸಿದ್ದಾರೆ.




