ಮಧ್ಯಾಹ್ನದ ಬಿಸಿಯೂಟದಲ್ಲಿ ಹಲ್ಲಿ: ಊಟ ಸೇವಿಸಿದ 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
ಬಳ್ಳಾರಿ: ಮಧ್ಯಾಹ್ನದ ಬಿಸಿಯೂಟದಲ್ಲಿ ಹಲ್ಲಿಯ ತುಂಡುಗಳು ಕಂಡು ಬಂದಿದ್ದು, ಊಟ ಸೇವಿಸಿದ 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಬಳ್ಳಾರಿ ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದಿದೆ.
ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಕ್ಕಳನ್ನು ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಜೆ.ಎನ್.ಗಣೇಶ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸುವಂತೆ ಸೂಚಿಸಿದರಲ್ಲದೆ, ಗ್ರಾಮಕ್ಕೆ ಹೆಚ್ಚಿನ ವೈದ್ಯರನ್ನು ಕಳುಹಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮ ತಾಲೂಕಿನಲ್ಲಿ ಇದುವರೆಗೂ ಇಂತಹ ಘಟನೆಗಳು ಸಂಭವಿಸಿಲ್ಲ. ಇದೊಂದು ವಿಷಾದನೀಯ ಸಂಗತಿಯಾಗಿದ್ದು, ಬಿಸಿಯೂಟ ತಯಾರಕರ ಬೇಜವಬ್ದಾರಿಯಿಂದಾಗಿ ಇಂತಹ ಘಟನೆ ಸಂಭವಿಸಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.





