ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ: ಹಾಜರಾತಿ ಹೆಚ್ಚಿಸಲು ಶಿಕ್ಷಕನ ವಿನೂತನ ಕೆಲಸ
ಬೆಳಗಾವಿ: ಮಕ್ಕಳ ವಿಮಾನ ಏರುವ ಕನಸನ್ನು ಬೆಳಗಾವಿ ತಾಲ್ಲೂಕು ಸೋನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ ದೇಯಣ್ಣವರ ಅವರು ನನಸು ಮಾಡಿದರು. ಶಾಲೆಗೆ ಪ್ರತಿದಿನವೂ ತಪ್ಪದೇ ಬರುವುದಾಗಿ ಹೇಳಿ ಮಾತು ಉಳಿಸಿಕೊಂಡ ಮಕ್ಕಳಿಗೆ ಅವರು ಬೆಳಗಾವಿಯಿಂದ ಹೈದರಾಬಾದ್‌ವರೆಗೆ ವಿಮಾನದ ಪ್ರಯಾಣದ ಕೊಡುಗೆ ನೀಡಿದರು.
ಪ್ರಕಾಶ ದೇಯಣ್ಣವರ ಅವರು ತಮ್ಮ ನಾಲ್ಕು ತಿಂಗಳ ವೇತನದ ಒಟ್ಟು ₹ 2.10 ಲಕ್ಷ ಹಣವನ್ನು ಅವರು ವಿಮಾನ ಪ್ರವಾಸಕ್ಕೆ ವಿನಿಯೋಗಿಸಿದರು. 17 ಮಕ್ಕಳು, ಮೂವರು ಶಿಕ್ಷಕರು ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಸೇರಿ ಎಲ್ಲ 21 ಜನರ ವಿಮಾನಯಾನ, ಊಟ, ವಸತಿ ವೆಚ್ಚವನ್ನು ಅವರೇ ನಿಭಾಯಿಸಿದರು. ವಿದ್ಯಾರ್ಥಿಗಳಿಂದ ತಲಾ ಮೂರು ಸಾವಿರ ರೂ. ಹಣ ಪಡೆದುಕೊಂಡಿದ್ದು, ಇನ್ನೂಳಿದ ಎರಡು ಲಕ್ಷ ರೂ. ಸ್ವಂತ ಹಣ ಖರ್ಚು ಮಾಡಿ ಎರಡು ದಿನದ ಪ್ರವಾಸ ಕರೆದುಕೊಂಡು ಹೋಗಿದ್ದಾರೆ. ಹೈದರಾಬಾದ್‌ನ ರಾಮೋಜಿರಾವ್ ಫಿಲ್ಮ್ ಸಿಟಿ, ಚಾರ್ ಮಿನಾರ್, ಸ್ನೊ ವರ್ಲ್ಡ್, ಗೋಲ್ಕೊಂಡ ಕೋಟೆ, ಸಲಾರ್ ಜಂಗ್ ವಸ್ತು ಸಂಗ್ರಹಾಲಯ ವೀಕ್ಷಿಸಿ, ಗ್ರಾಮಕ್ಕೆ ಮರಳಿದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಕೂಡ ಕಡಿಮೆ ಇದೆ. ಹೀಗಾಗಿ ಹಾಜರಾತಿ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ವಿಮಾನ ಪ್ರವಾಸ ಭಾಗ್ಯವನ್ನು ನೀಡಲಾಯಿತು. ಇದರಿಂದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ಶಿಕ್ಷಕ ಪ್ರಕಾಶ್ ದೇವಣ್ಣವರ್ ಹೇಳಿದ್ದಾರೆ.