ಹಿಂದೂ ದೇವಾಲಯದ ಹೊರಗೆ ಖಾಲಿಸ್ತಾನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆನಡಾದ ಪೋಲೀಸ್ ಅಮಾನತು
ಕೆನಡಾ: ಬ್ರಾಂಪ್ಟನ್ ನಲ್ಲಿ ಹಿಂದೂ ದೇವಾಲಯದ ಎದುರು ನಡೆದ ಖಲಿಸ್ತಾನಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಕೆನಡಾ ಸರ್ಕಾರ ಅಮಾನತು ಮಾಡಿದೆ.
ಅಮಾನತುಗೊಂಡ ಪೋಲೀಸ್ ಹರಿಂದರ್ ಸೋಹಿ ಎಂದು ಗುರುತಿಸಲಾಗಿದ್ದು, ಅವರು ಖಲಿಸ್ತಾನ್ ಧ್ವಜವನ್ನು ಹಿಡಿದಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರತಿಭಟನೆಯಲ್ಲಿ ಇತರರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಸೋಹಿ ಪೀಲ್ ಪ್ರಾದೇಶಿಕ ಪೊಲೀಸ್‌ನ ಸಾರ್ಜೆಂಟ್ ಆಗಿದ್ದರು. ಅಧಿಕಾರಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿಡಿಯೊ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಂಡಿದೆ.
ಪೀಲ್ ಪ್ರಾದೇಶಿಕ ಪೊಲೀಸ್ ಕಚೇರಿಯಲ್ಲಿ ಸಾರ್ಜೆಂಟ್ ಆಗಿ ಸೋಹಿ ಕಾರ್ಯ ನಿರ್ವಹಿಸುತ್ತಿದ್ದರು. “ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ, ಕರ್ತವ್ಯದಲ್ಲಿಲ್ಲದ ಪೀಲ್ ಪೊಲೀಸ್ ಅಧಿಕಾರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ವಿಡಿಯೊ ಬಗ್ಗೆ ನಮಗೆ ಅರಿವು ಇದೆ” ಎಂದು ಮಾಧ್ಯಮ ಸಂಪರ್ಕ ಅಧಿಕಾರಿ ರಿಚರ್ಡ್ ಚಿನ್ ಹೇಳಿದ್ದಾರೆ.
ಸಮುದಾಯ ಸುರಕ್ಷೆ ಮತ್ತು ಪೊಲೀಸಿಂಗ್ ಕರ್ತವ್ಯದ ಅನುಸಾರ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಒಟ್ಟಾಗಿ ಈ ಘಟನೆಯ ಘಟನಾವಳಿಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಇನ್ನಷ್ಟು ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಕಾನ್ಸುಲರ್ ಅಧಿಕಾರಿಗಳು ರವಿವಾರ ಹಿಂದೂ ಸಭಾ ಮಂದಿರ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೂರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೀಲ್ ಪ್ರಾದೇಶಿಕ ಪೊಲೀಸ್ ಇಲಾಖೆ ಹೇಳಿಕೆ ನೀಡಿತ್ತು.