November 22, 2024

ಮಂಗಳೂರು: ಅಮೆಜಾನ್ ಕಂಪನಿಗೆ 30 ಕೋಟಿ ಪಂಗನಾಮ: ಇಬ್ಬರ ಬಂಧನ

0

ಮಂಗಳೂರು: ಜಾಗತಿಕ ಆನ್ಲೈನ್ ಮಾರುಕಟ್ಟೆ ದೈತ್ಯ ಅಮೆಜಾನ್ ಕಂಪನಿಗೆ ಮೋಸ ಮಾಡಿ, ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಕೇಸು ಎದುರಿಸುತ್ತಿದ್ದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಸ್ಥಾನ ಮೂಲದ ರಾಜಕುಮಾರ್ ಮೀನಾ (23), ಸುಭಾಸ್ ಗುರ್ಜರ್ (27) ಬಂಧನಕ್ಕೊಳಗಾಗಿರುವ ಆರೋಪಿಗಳಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಸುಮಾರು 30 ಕೋಟಿಗೂ ಹೆಚ್ಚು ಹಣವನ್ನು ಪಂಗನಾಮ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ, ಅಸ್ಸಾಂ ಸೇರಿ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಇದೇ ರೀತಿಯ ಪ್ರಕರಣಗಳನ್ನು ಎದುರಿಸುತ್ತಿದ್ದು, ನಕಲಿ ಸಿಮ್, ನಕಲಿ ಹೆಸರು ಬಳಸಿ 4-5 ವರ್ಷಗಳಿಂದ ನಿರಂತರ ಮೋಸ ಎಸಗುತ್ತಿದ್ದ ಖದೀಮರಾಗಿದ್ದಾರೆ ಎಂದು ಮಂಗಳೂರಿನ ಉರ್ವಾ ಪೊಲೀಸರು ತಿಳಿಸಿದ್ದಾರೆ.

ಅಮೆಜಾನ್ ವಿಜಿಲೆನ್ಸ್ ವಿಭಾಗಕ್ಕೇ ಸವಾಲಾಗಿದ್ದ ಇಬ್ಬರು ಯುವಕರ ಮೋಸದ ಜಾಲವನ್ನು ಮಂಗಳೂರು ಪೊಲೀಸರು ಬೇಧಿಸಿದ್ದಾರೆ. ಮಂಗಳೂರಿನ ಉರ್ವಾ ಠಾಣೆಯಲ್ಲಿ ಸೆ.21ರಂದು ಅಮೆಜಾನ್ ಪ್ರತಿನಿಧಿಯೊಬ್ಬರು ನೀಡಿರುವ ದೂರಿನ ಜಾಡನ್ನು ಹುಡುಕಿದ ಪೊಲೀಸರಿಗೆ ಈ ಇಬ್ಬರು ಉತ್ತರಪ್ರದೇಶದ ಆರೋಪಿಗಳನ್ನು ವಿವರ ಪಡೆದು ಅವರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಅಮೆಝಾನ್‌ ನಲ್ಲಿ ವಿವಿಧ ಬೆಲೆಬಾಳುವ ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದರು. ಈ ವಸ್ತುಗಳನ್ನು ಪಡೆ ಯಲು ಬೇರೆ ಬೇರೆ ಕಡೆಯ ಸ್ಥಳಗಳ ವಿಳಾಸ ನೀಡುತ್ತಿದ್ದರು. ಅದರಂತೆ ಈ ವಸ್ತುಗಳನ್ನು ಪಡೆಯಲು ಆರೋಪಿಗಳು ವಿಮಾನದಲ್ಲೂ ಹೋಗಿ ಬರುವ ಚಾಳಿ ಹೊಂದಿದ್ದರು ಎನ್ನಲಾಗಿದೆ. ಹೀಗೆ ವಸ್ತುಗಳನ್ನು ಪಡೆಯಲು ವಸ್ತು ತುಂಬಿರುವ ಬಾಕ್ಸ್‌ಗಳ ಮೇಲಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿ, ಅದನ್ನು ಪಡೆಯುವ ಮೂಲಕ ಅಮೆಝಾನ್ ಕಂಪೆನಿಗೆ ಕೋಟ್ಯಂತರ ರೂ. ವಂಚಿಸುತ್ತಿದ್ದರು ಎಂದು ಉರ್ವ ಪೊಲೀಸರು ಮಾಹಿತಿ ನೀಡಿದ್ದಾರೆ. ವಸ್ತುಗಳು ಡೆಲಿವರಿಯಾದ ಬಳಿಕ ಅದರ ಮೇಲಿನ ಟ್ರ್ಯಾಕಿಂಗ್ ಲೇಬಲ್‌ಗಳನ್ನು ಕಡಿಮೆ ಬೆಲೆಯ ವಸ್ತುಗಳು ತುಂಬಿದ ಬಾಕ್ಸ್‌ಗಳ ಮೇಲೆ ಹಚ್ಚುತ್ತಿದ್ದರು. ಹಾಗೇ ದುಬಾರಿ ಬೆಲೆಯ ವಸ್ತುಗಳನ್ನು ತಮ್ಮಲ್ಲೇ ಇರಿಸಿಕೊಳ್ಳುತ್ತಿದ್ದರು. ಬಳಿಕ ಅದನ್ನು ಮಾರಾಟ ಮಾಡುತ್ತಿದ್ದರು. ಹೀಗೆ ದೇಶದ ನಾನಾ ಕಡೆಯ ನಗರಗಳ ವಿಳಾಸ ನೀಡಿ ಅಮೆಝಾನ್ ಕಂಪೆನಿಂದ 30 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಪಡೆದು ಬಳಿಕ ವಂಚಿಸಿರುವುದಾಗಿ ತಿಳಿದು ಬಂದಿದೆ.

ಈ ಆರೋಪಿಗಳು ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ವಿಳಾಸದಲ್ಲಿ ʼಅಮಿತ್ʼ ಎಂಬ ಹೆಸರಿನಲ್ಲಿ ಎರಡು ದುಬಾರಿ ಮೌಲ್ಯದ ಸೋನಿ ಕ್ಯಾಮೆರಾಗಳು ಮತ್ತು ಇತರ 10 ವಸ್ತುಗಳಿಗೆ ನಕಲಿ ವಿಳಾಸ ನೀಡಿ ಆರ್ಡರ್ ಮಾಡಿದ್ದರು. ಹೀಗೆ ಬಂದ ಸಾಮಗ್ರಿಗಳನ್ನು ಸ್ವೀಕರಿಸಿ ಬಳಿಕ ರಿಟರ್ನ್ ಮಾಡುವ ಸಂದರ್ಭ ತಪ್ಪು ಒಟಿಪಿ ಸಂಖ್ಯೆ ನೀಡಿದ ಕಾರಣ ಡೆಲಿವರಿ ದೃಢೀಕರಣದಲ್ಲಿ ವಿಳಂಬವಾಯಿತು. ಹಾಗಾಗಿ ಮರುದಿನ ಕ್ಯಾಮೆರಾಗಳನ್ನು ಪಡೆಯುವಂತೆ ರಾಜ್‌ ಕುಮಾರ್ ಮೀನಾ ಹೇಳಿದ್ದರಿಂದ ಅಮೆಝಾನ್ ಡೆಲಿವರಿ ಸಿಬ್ಬಂದಿಯು ವಾಪಸ್ ಮರಳಿದರು. ಅದಾದ ಬಳಿಕ ಆರೋಪಿಗಳು ಸೋನಿ ಕ್ಯಾಮೆರಾಗಳ ಆರ್ಡರ್ ರದ್ದುಗೊಳಿಸಿದಾಗ ಅನುಮಾನ ವ್ಯಕ್ತವಾಯಿತು. ಅಲ್ಲದೆ ಬಾಕ್ಸ್‌ಗಳನ್ನು ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ

11.32 ಲಕ್ಷದ ಸಾಮಗ್ರಿ ಪೈಕಿ ದೊಡ್ಡ ಮೊತ್ತದ ವಸ್ತುಗಳನ್ನು ಮಾತ್ರ ಪಡೆಯುತ್ತಿದ್ದ ಈ ಆರೋಪಿಗಳು, ನಕಲಿ ಸಿಮ್ ಬಳಸಿ ಈ ಕೃತ್ಯ ಎಸಗುತ್ತಿದ್ದುದರಿಂದ ಇವರ ಪತ್ತೆ ಸಾಧ್ಯವಾಗಿರಲಿಲ್ಲ, ಅಮೆಜಾನ್ ಕಂಪನಿಯ ನೀತಿಯನ್ನೆ ಬಂಡವಾಳ ಮಾಡಿಕೊಂಡು 2019 ರಿಂದ ನಿರಂತರ ಮೋಸವೆಸಗುತ್ತಿದ್ದರು ಎಂದು ತಿಳಿದುಬಂದಿದೆ.

ತಿರುವನಂತಪುರ, ಸೇಲಂ, ಜೈಪುರ, ಮೈಸೂರು, ಮಂಗಳೂರು ಹೀಗೆ ದೇಶಾದ್ಯಂತ ಎರಡನೇ ಹಂತದ ನಗರಗಳಲ್ಲಿ ಅಮೆಜಾನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿ ವಂಚಿಸುತ್ತಿದ್ದರು. ಈ ವಿಚಾರ ಅಮೆಜಾನ್ ವಿಜಿಲೆನ್ಸ್ ವಿಭಾಗಕ್ಕೆ ಮೋಸದ ಜಾಲ ತಿಳಿದರೂ, ಪತ್ತೆ ಮಾಡುವುದು ಕಷ್ಟವಾಗಿತ್ತು. ಕೊನೆಗೆ ಹತ್ತಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿದ್ದ ಇಬ್ಬರು ಚಾಣಾಕ್ಷ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಉರ್ವಾ ಇನ್ಸ್ ಪೆಕ್ಟರ್ ಭಾರತಿ ನೇತೃತ್ವದಲ್ಲಿ ಪೊಲೀಸರ ಕಾರ್ಯಾಚರಣೆ ನಡೆದಿದ್ದು. ತೀವ್ರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ. ಇವರಿಂದ ಇನ್ನಷ್ಟು ವಂಚನೆಯ ಆರೋಪಗಳು ಬಯಲಾಗಬೇಕಾಗಿದೆ. ಆದ್ದರಿಂದ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!