ಉಡುಪಿ: ನೇಜಾರಿನಲ್ಲಿ ತಾಯಿ ಮಕ್ಕಳ ಭೀಕರ ಹತ್ಯೆ ಪ್ರಕರಣ: ನ.20 ರಿಂದ ಸಾಕ್ಷಿಗಳ ವಿಚಾರಣೆ ಆರಂಭ
ಉಡುಪಿ: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಭೀಕರ ಹತ್ಯೆ ಪ್ರಕರಣದ ಸಾಕ್ಷಿಗಳ ವಿಚಾರಣೆಯು ನ.20ರಿಂದ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರಂಭಗೊಳ್ಳಲಿದೆ.
ಪ್ರಕರಣದ ವಿಚಾರಣೆಗೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ 2024ರ ಆ.30ರಂದು ತೆರವಾಗಿದ್ದು, ಪ್ರಕರಣದ ಸಾಕ್ಷ್ಯ ವಿಚಾರಣೆ ಆರಂಭಿಸುವಂತೆ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ನ್ಯಾಯಾಲಯವನ್ನು ಕೋರಿದರು. ಅಲ್ಲದೆ ಸಾಕ್ಷಿಗಳು ಆರೋಪಿಯ ಗುರುತು ಪತ್ತೆ ಮಾಡಲು ಆತನನ್ನು ವಿಚಾರಣೆ ಸಂದರ್ಭ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ವಿಶೇಷ ಸರಕಾರಿ ಅಭಿಯೋಜಕರ ವಾದವನ್ನು ಆಲಿಸಿದ ನ್ಯಾಯಾಧೀಶ ಎ.ಸಮೀವುಲ್ಲಾ, ನ.20 ಮತ್ತು 21ರಂದು ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಿ, ಅದೇ ದಿನ ಸೂಕ್ತ ಭದ್ರತೆಯೊಂದಿಗೆ ಕೊಲೆ ಆರೋಪಿ ಪ್ರವೀಣ್ ಚೌಗುಲೆ ಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಮಲ್ಪೆ ಪೊಲೀಸ್ ನಿರೀಕ್ಷಕರಿಗೆ ನಿರ್ದೇಶನ ನೀಡಿದರು. ನ. 20ರಂದು 1 ಹಾಗೂ 2 ಹಾಗೂ ನ.21ರಂದು 3 ಹಾಗೂ 4ನೇ ಸಾಕ್ಷಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ.
ಈ ಹಿಂದೆ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿಯಾಗಿದ್ದು ಬಳಿಕ ಹೈಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿತ್ತು.