ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಗುಂಡಿಕ್ಕಿ ಹತ್ಯೆ
ಮುಂಬೈ: ನಗರದಲ್ಲಿ ಶನಿವಾರ(ಅ18) ರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಎನ್‌ಸಿಪಿಯ ಹಿರಿಯ ನಾಯಕ ಬಾಬಾ ಸಿದ್ದಿಕಿ(66) ಅವರನ್ನು ಹತ್ಯೆಗೈದಿದ್ದಾರೆ. ಗುಂಡಿನ ದಾಳಿ ನಡೆದ ತತ್ ಕ್ಷಣ ಸಮೀಪದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಾಬಾ ಸಿದ್ದಿಕಿ ಕೊನೆಯುಸಿರೆಳೆದಿದ್ದಾರೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ NCP ಬಣದಲ್ಲಿ ಗುರುತಿಸಿಕೊಂಡಿದ್ದ ಬಾಬಾ ಸಿದ್ದಿಕಿ ಸಿನಿ ರಂಗದಲ್ಲಿ ಭಾರೀ ಪ್ರಭಾವ ಹೊಂದಿದ್ದ ನಾಯಕರಾಗಿದ್ದರು. ಸಲ್ಮಾನ್, ಶಾರುಖ್ ಖಾನ್ ಅವರೊಂದಿಗೂ ಆತ್ಮೀಯತೆ ಹೊಂದಿದ್ದರು.
ವಂಡ್ರೆ ಪೂರ್ವದ ಶಾಸಕರಾಗಿರುವ ಅವರ ಪುತ್ರ ಜೀಶನ್ ಸಿದ್ದಿಕ್ ಅವರ ಕಚೇರಿ ಬಳಿ ಈ ಘಟನೆ ನಡೆದಿದೆ. ದಾಳಿಯ ವಿವರಗಳು ಅಸ್ಪಷ್ಟವಾಗಿದ್ದರೂ, ಕನಿಷ್ಠ ಮೂವರು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಆರಂಭಿಕ ವರದಿಗಳು ಸೂಚಿಸಿವೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬೈ ಪೊಲೀಸರು ಭಾರೀ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ರಾಜಕೀಯದಲ್ಲಿ ಬಾಬಾ ಸಿದ್ದಿಕಿ ದೊಡ್ಡ ಹೆಸರು. ಮಾಜಿ ಸಚಿವರಾಗಿರುವ ಅವರು ಮೂರು ಬಾರಿ ಶಾಸಕರಾಗಿದ್ದರು. ಬಾಂದ್ರಾ ಪೂರ್ವ ಭಾಗದಲ್ಲಿ ಬಾಬಾ ಸಿದ್ದಿಕಿ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ನಿರ್ಮಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಮುಂಬೈ ಅಪರಾಧ ವಿಭಾಗದ ತಂಡಗಳು ಸ್ಥಳಕ್ಕೆ ಧಾವಿಸಿವೆ. ಈ ಪ್ರಕರಣದಲ್ಲಿ ಇಬ್ಬರು ಶೂಟರ್‌ಗಳನ್ನು ಬಂಧಿಸಲಾಗಿದೆ. ಶೂಟರ್‌ಗಳು ಸಿದ್ದಿಕಿ ಮೇಲೆ ಆರು ಸುತ್ತು ಗುಂಡು ಹಾರಿಸಿದ್ದು, ಮೂರು ಗುಂಡುಗಳು ಸಿದ್ದಿಕಿ ದೇಹ ಸೇರಿದ್ದವು.
ವಂಡ್ರೆ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂಡಾ 1999, 2004 ಮತ್ತು 2009 ರಲ್ಲಿ ಸತತ ಮೂರು ಅವಧಿಗೆ ಶಾಸಕರಾಗಿದ್ದರು. 2004-08 ಅವಧಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಕಾರ್ಮಿಕ ಖಾತೆ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1976 ರಿಂದ ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು 2024 ರಲ್ಲಿ ಸೇರಿದ್ದರು. ಜೀಶನ್ ಬಾಬಾ ಸಿದ್ದಿಕ್ ಕಾಂಗ್ರೆಸ್‌ನ ಶಾಸಕರಾಗಿದ್ದಾರೆ. ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.




