ಈದ್ ಮಿಲಾದ್ ಮೆರವಣಿಗೆಗೆ ಸರಕಾರ ಅವಕಾಶ ಕೊಡಬಾರದು: ಶರಣ್ ಪಂಪ್ವೆಲ್
ಮಂಗಳೂರು: ಮುಂದಿನ ವಾರ ಈದ್ ಮಿಲಾದ್ ಮೆರವಣಿಗೆ ಮೇಲೆ ಸಂಘಪರಿವಾರ ದಾಳಿ ಮಾಡಿದರೆ ಏನಾಗಬಹುದು ಅಂತಾ ಊಹೆ ಇದೆಯಾ? ಅದರಿಂದ ನಿನ್ನೆಯ ದಾಳಿಕೋರರಿಗೆ ಎಚ್ವರಿಕೆ ಸಂದೇಶ ಕೊಡುತ್ತಿದ್ದೇವೆ. ಸರ್ಕಾರ ಈದ್ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಬಾರದು ಎಂದು ವಿಹೆಚ್ಪಿ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮಲ್ಲಿಕಟ್ಟೆ ಸರ್ಕಲ್ ಬಳಿ ವಿಹೆಚ್ಪಿ ಧರಣಿ ಕೈಗೊಂಡಿದೆ. ಈ ವೇಳೆ ಮಾತನಾಡಿದ ಅವರು, ಸೋಮವಾರ ಈದ್ ಮಿಲಾದ್ ಮೆರವಣಿಗೆಗೆ ಅವಕಾಶ ಕೊಡಬಾರದು. ಅನುಮತಿ ಕೊಟ್ಟರೆ ಮತ್ತೆ ಇವರು ಗಲಭೆ ಮಾಡುತ್ತಾರೆ. ಇದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆ ಆಗುತ್ತದೆ ಎಂದು ಕಿಡಿಕಾರಿದ್ದಾರೆ.
ಗಣೇಶೋತ್ಸವ ನಡೆಸಬಾರದೆಂದು ಪೂರ್ವನಿಯೋಜಿತ ಕೃತ್ಯ. ಇದು ಕೋಮುಗಲಭೆ ಅಲ್ಲ, ಇದು ಗಣೇಶೋತ್ಸವ ಸಮಿತಿಯ ಮೇಲೆ ನಡೆದಿರುವ ದಾಳಿ ಎಂದರು.
ಗೃಹ ಸಚಿವರು ಆಕಸ್ಮಿಕ ಘಟನೆ ಅಂತಾ ಹೇಳಿದ್ದಾರೆ. ನಿಮ್ಮ ಇಲಾಖೆಯ ಪೊಲೀಸರ ಮೇಲೆ ಹಲ್ಲೆ ಆಗಿ ಗಾಯಗೊಂಡಿದ್ದಾರೆ. ಇದು ನಿಮಗೆ ಸಣ್ಣ ಘಟನೆನಾ ಎಂದು ಪ್ರಶ್ನಿಸಿದ್ದಾರೆ. ಡಿ.ಜೆ.ಹಳ್ಳಿ, ಕೆಜೆ ಹಳ್ಳಿ, ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆಗಳ ನಂತರವೂ ಎಚ್ಚೆತ್ತುಕೊಂಡಿಲ್ಲ ಎಂದು ಹೇಳಿದ್ದಾರೆ.




