July 1, 2026

ಮಂಗಳೂರು: ಚಿನ್ನಾಭರಣ ವ್ಯಾಪಾರಿಯ ದರೋಡೆ: ಅಪಹರಿಸಿದ್ದ ಕಾರು ಬಂಟ್ವಾಳದಲ್ಲಿ ಪತ್ತೆ

0
IMG-20260630-WA0075

ಪಣಂಬೂರು: ಸೋಮವಾರ ನಸುಕಿನ ವೇಳೆ ಬೈಕಂಪಾಡಿ ಬಳಿ ನಡೆದ ಚಿನ್ನಾಭರಣ ವ್ಯಾಪಾರಿಯ ದರೋಡೆ ಪ್ರಕರಣದ ತನಿಖೆ ಹೊಸ ತಿರುವು ಪಡೆದಿದೆ. ದುಷ್ಕರ್ಮಿಗಳು ಅಪಹರಿಸಿದ್ದ ಕಾರು ಬಂಟ್ವಾಳ ಠಾಣೆ ವ್ಯಾಪ್ತಿಯ ಬೆಂಜನಪದವಿನಲ್ಲಿ ಪತ್ತೆಯಾಗಿದೆ.

ಆರೋಪಿಗಳು ಕಾರನ್ನು ತ್ಯಜಿಸಿ ಪರಾರಿಯಾಗಿದ್ದಾರೆ. ಚಿನ್ನ ಹುಡುಕಾಟಕ್ಕೆ ಕಾರಿನ ಸೀಟ್‌ ಕವರ್‌ಗಳನ್ನು ಹರಿದು ಹಾಕಿ ದರೋಡೆಕೋರರು ಸಂಪೂರ್ಣವಾಗಿ ಶೋಧಿಸಿರುವುದು ಕಂಡುಬಂದಿದೆ. ಕಾರಿನಲ್ಲಿ ಬೆಲೆಬಾಳುವ ವಸ್ತು ಅಡಗಿಸಿಟ್ಟಿರಬಹುದು ಎಂಬ ಶಂಕೆಯಿಂದ ಸೀಟುಗಳನ್ನು ಹರಿದು ಹಾಕಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ದರೋಡೆ ಕೋರರು ಅಪಹರಿಸಿದ್ದ ವ್ಯಾಪಾರಿಯ ಕಾರು ಬೆಂಜನಪದವಿನಲ್ಲಿ ಪತ್ತೆಯಾಗಿದ್ದರೂ ಕಸಿದುಕೊಂಡ ಮೊಬೈಲ್‌ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಮೊಬೈಲ್‌ ಸ್ವಿಚ್‌ ಆಫ್‌ ಆಗಿರುವುದರಿಂದ ಆರೋಪಿಗಳು ಅದನ್ನು ನಾಶಪಡಿಸಿರುವ ಅಥವಾ ದೂರ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಮೊಬೈಲ್‌ ಟವರ್‌ಡಂಪ್‌ ಆಧರಿಸಿ ಜಾಡು ಹಿಡಿಯುವ ಯತ್ನ ನಡೆಯುತ್ತಿದೆ.

ವ್ಯಾಪಾರಿಯ ಕಾರು ಬೆಂಜನಪದವಿನಲ್ಲಿ ಪತ್ತೆಯಾಗಿದ್ದು, ದರೋಡೆಕೋರರು ಬಳಸಿದ ಮೂರು ಕಾರುಗಳು ಇದೇ ಮಾರ್ಗವಾಗಿ ಬಂದು ಹೋಗಿರುವ ಸಾಧ್ಯತೆ ಇದೆ. ಇದೇ ಭಾಗದಿಂದ ಹೆದ್ದಾರಿ ಮೂಲಕ ಬೆಂಗಳೂರು, ಕೊಡಗು ಮಾರ್ಗವಾಗಿ ಕೇರಳ, ಧರ್ಮಸ್ಥಳ ಮಾರ್ಗವಾಗಿ ಚಿಕ್ಕಮಗಳೂರು, ಇಲ್ಲವೇ ತಲಪಾಡಿ ಮಾರ್ಗವಾಗಿ ಕೇರಳ ಕಡೆಗೆ ಆರೋಪಿಗಳು ಪರಾರಿಯಾಗಿರುವ ಸಾಧ್ಯತೆಯಿದೆ. ಹೀಗಾಗಿ ಆಯಾ ಭಾಗದ ಟೋಲ್‌ ಗೇಟ್‌ ಹಾಗೂ ಪ್ರಮುಖ ಜಂಕ್ಷನ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!