ಮಂಗಳೂರು/ಉಡುಪಿ: ಕಡಲಿನಲ್ಲಿ ಅಲೆಗಳ ಆರ್ಭಟ: ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ
ಮಂಗಳೂರು/ಉಡುಪಿ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇನ್ನೆರಡು ದಿನ ವೇಗದ ಗಾಳಿ-ಮಳೆಯೊಂದಿಗೆ ಕಡಲು ಪ್ರಕ್ಷುಬ್ಧಗೊಳ್ಳಲಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ರವಾನಿಸಿದೆ.
ಜು.31ರವರೆಗೆ ಕರಾವಳಿ ತೀರದಲ್ಲಿ ಗಂಟೆಗೆ 35ರಿಂದ 45ಕಿ.ಮೀ. ವೇಗದ ಗಾಳಿಯು ಬೀಸಲಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಕಡಲಿ ನಲ್ಲಿ 2.4ರಿಂದ 3ಮೀ. ಎತ್ತರ ತೆರೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಿರುವನಂತಪುರಂ ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಅದು ಎಚ್ಚರಿಕೆ ನೀಡಿದೆ.
ಮೂರು ಜಿಲ್ಲೆಗಳ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟಕಳ, ಗಂಗೊಳ್ಳಿ, ಮಲ್ಪೆ ಬಂದರುಗಳಲ್ಲಿ ಎಚ್ಚರಿಕೆ ಸಿಗ್ನಲ್ ಮೂರನ್ನು ಹಾರಿಸುವಂತೆ ಅದು ಸೂಚನೆಗಳನ್ನು ನೀಡಿದೆ. ಬೈಂದೂರಿನಲ್ಲಿ 103ಮಿ.ಮೀ ಮಳೆ: ಜಿಲ್ಲೆಯಲ್ಲಿ 62.2ಮಿ.ಮೀ ಮಳೆ: ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 62.2ಮ.ಮೀ. ಮಳೆಯಾಗಿದೆ.
ಜಿಲ್ಲೆಯ ಬೈಂದೂರಿನಲ್ಲಿ ಅತ್ಯಧಿಕ 103.1ಮಿ.ಮೀ. ಮಳೆಯಾದ ವರದಿ ಬಂದಿದೆ.ಕುಂದಾಪುರದಲ್ಲಿ 85.6ಮಿ.ಮೀ. ಮಳೆಯಾದರೆ, ಹೆಬ್ರಿಯಲ್ಲಿ 51.9ಮಿ.ಮೀ, ಬ್ರಹ್ಮಾವರದಲ್ಲಿ 46.1ಮಿಮೀ., ಕಾರ್ಕಳದಲ್ಲಿ 37.9, ಉಡುಪಿಯಲ್ಲಿ 37.0 ಹಾಗೂ ಕಾಪುವಿನಲ್ಲಿ 27.7ಮಿ.ಮೀ. ಮಳೆಯಾದ ವರದಿ ಬಂದಿದೆ.