ಖ್ಯಾತ ಕಾಷ್ಠ ಶಿಲ್ಪಿ ನಾರಾಯಣ ಆಚಾರ್ಯ ಮುರುವ ಮಾಣಿಲ ಇನ್ನಿಲ್ಲ
ಪೆರುವಾಯಿ: ಮುರುವ ಬಳಿಯ ಮಾಣಿಲ ನಿವಾಸಿ, ಖ್ಯಾತ ಕಾಷ್ಠ ಶಿಲ್ಪಿ ನಾರಾಯಣ ಆಚಾರ್ಯ (75) ಹೃದಯಾಘಾತದಿಂದ ನಿನ್ನೆ ರಾತ್ರಿ ನಿಧನರಾದರು. ಮೃತರು ದಿ. ಫಕೀರ ಆಚಾರ್ಯ – ದಿ. ಪುಟ್ಟಮ್ಮ ದಂಪತಿಗಳ ಪುತ್ರನಾಗಿದ್ದು, ಮರದ ಕೆತ್ತನೆ ಕೆಲಸದ ಜೊತೆ ಖ್ಯಾತ ಕಾಷ್ಠ ಶಿಲ್ಪಿಯಾಗಿ ಹೆಸರುವಾಸಿಯಾಗಿದ್ದರು.
ತಂದೆಯ ಜೊತೆ ಹಾಗೂ ಮಂಜೇಶ್ವರದ ರಥದ ಶಿಲ್ಪಿ ದಿ. ಈಶ್ವರ ಆಚಾರ್ಯರ ಮಾರ್ಗದರ್ಶನದಲ್ಲಿ ರಥದ ಶಿಲ್ಪದ ಭವ್ಯ ಪರಂಪರೆಯನ್ನು ವಿನೂತನ ಶೈಲಿಯಲ್ಲಿ ರಚಿಸಿ ಕೀರ್ತಿ ಪಡೆದಿದ್ದರು. ಮುರುವದ ಗ್ರಾಮ ದೈವ ಪಂಜುರ್ಲಿ, ಹುಲಿಭೂತಗಳ ವರಾಹ ಮತ್ತು ವ್ಯಾಘ್ರ ಬಂಡಿಯಲ್ಲಿ ಇವರ ಕೈಚಳಕದ ಕೆತ್ತನೆಯನ್ನು ಈಗಲೂ ಕಾಣಬಹುದು. ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ಮಾಣಿಲ, ಕೇಪು, ಚೆಲ್ಲಡ್ಲ ಮುಂತಾದ ಕಡೆಗಳಲ್ಲಿ ರಚಿತವಾದ ಶಿಲ್ಪ ಕಲೆಗಳಲ್ಲಿ ಇವರ ಕಲಾ ಪ್ರೌಢಿಮೆ ಎದ್ದು ಕಾಣುವಂತಿದೆ. ಅದೇ ರೀತಿ ಬೆಂಗಳೂರು ಗಿರಿನಗರ ಗಣೇಶ ದೇವಾಲಯದಲ್ಲಿ ಕೂಡ ಇವರ ಕಾಷ್ಠ ಶಿಲ್ಪ ಕಲೆಯ ಕೈಚಳಕವನ್ನು ಈಗಲೂ ಕಾಣಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ರಥಶಿಲ್ಪದ ಕಾರ್ಯವನ್ನು ನಿರ್ವಹಿಸಿ ಎಲ್ಲರಿಂದಲೂ ಗೌರವಾನ್ವಿತ ವ್ಯಕ್ತಿಯಾಗಿ, ಹೆಸರುವಾಸಿಯಾಗಿದ್ದರು.
ಕಲೆಗಾಗಿ ಇವರು ಮಾಡಿದ ತ್ಯಾಗ ಅಮರವಾದದೆಂದು ತಿಳಿದವರು ಕೆಲವೇ ಮಂದಿ. ಅದನ್ನು ಹೇಳಿಕೊಳ್ಳುವ ಸ್ವಭಾವ ಇವರದ್ದಲ್ಲವಾಗಿದ್ದರಿಂದ ಇವರ ಭಾವನೆ, ಕಲ್ಪನೆ, ಆಲೋಚನೆ ಎಲ್ಲದರಲ್ಲಿಯೂ ದೂರವಾಗಿ ಬಹುದೂರವಾಗಿ ಮುಂದುವರಿದು ಪ್ರತಿಭಾ ಶಾಲಿಯಾಗಿ, ಕಲಾ ದರ್ಶನ ಸಂಪಾದನೆ ಮಾಡಿದ್ದಾರೆ. ಇವರ ಕಾಷ್ಠ ಶಿಲ್ಪ ಕಲೆಯ ಸೇವೆಯನ್ನು ಮನಗಂಡು ಶ್ರೀ ದುರ್ಗಾ ಪರಮೇಶ್ವರೀ ಯುವಕ ಸಂಘ ತಾರಿದಳ ಮಾಣಿಲ ತಮ್ಮ ದಶಮಾನೋತ್ಸವದ ವಾರ್ಷಿಕ ವೇಳೆ ಹುಟ್ಟೂರ ಸನ್ಮಾನವನ್ನು ಸ್ವೀಕರಿಸಿದ್ದರು. ವಿಶ್ರಾಂತ ಜೀವನ ನಡೆಸುತ್ತಿದ್ದ ನಾರಾಯಣ ಆಚಾರ್ಯರಿಗೆ ನಿನ್ನೆ ರಾತ್ರಿ 8.00 ಗಂಟೆ ವೇಳೆ ಸ್ವ – ಗೃಹದಲ್ಲಿ ಹೃದಯಾಘಾತಗೊಂಡಿತು. ಕೂಡಲೇ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಅಪರಾಹ್ನ 3.00 ಗಂಟೆಗೆ ವಿಟ್ಲದ ಹಿಂದೂ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರು ಪತ್ನಿ: ನಿರ್ಮಲ, ಮಕ್ಕಳಾದ ಗೋಪಾಲಕೃಷ್ಣ ಆಚಾರ್ಯ, ಹೇಮಂತ ಆಚಾರ್ಯ, ಸನತ್ ಆಚಾರ್ಯ, ಸುನಿಲ್ ಕುಮಾರ್ ಆಚಾರ್ಯ, ಸೊಸೆಯಂದಿರಾದ: ಪ್ರಿಯ, ದೀಪಿಕಾ, ಸಹೋದರ – ಸಹೋದರಿಯರಾದ: ರಾಘವ ಆಚಾರ್ಯ ಬೆಂಗಳೂರು, ಸುಶೀಲ ಆಚಾರ್ಯ ಮೂವಾಜೆ, ಶಾರದಾ ಆಚಾರ್ಯ ಬೆಂಗಳೂರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.