ಮಂಗಳೂರು: ಅಪ್ರಾಪ್ತ ಮಗುವಿನ ಅಪಹರಣ ಪ್ರಕರಣ: ಘಟನೆ ನಡೆದ 2 ಗಂಟೆಯೊಳಗೆ ಪ್ರಕರಣ ಬೇಧಿಸಿದ ಕಂಕನಾಡಿ ಎಸೈ ಶಿವಕುಮಾರ್ ಅವರ ತಂಡ
ಮಂಗಳೂರು: ನಗರದ ಅಳಪೆ ಪಡೀಲ್ ನಲ್ಲಿರುವ ಅರಣ್ಯ ಇಲಾಖೆಯ ಸಸ್ಯವನ ಬಳಿ ದಿನಾಂಕ: 31-08-2024 ರಂದು ಸಂಜೆ ವೇಳೆಗೆ ಸುಮಾರಿಗೆ ಎರಡುವರೆ ವರ್ಷದ ಮಗು ಅಪಹರಣ ಆದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೀಶ್ ಕುಮಾರ್ ನನ್ನು ದಸ್ತಗಿರಿ ಮಾಡಿರುವುದಾಗಿದೆ. ಈತನು ತನ್ನ ಊರಿನಿಂದ ದಿನಾಂಕ: 28-08-2024 ರಂದು ಮನೆಯಲ್ಲಿ ಗಲಾಟೆ ಮಾಡಿಕೊಂಡು ಮುಂಬೈಗೆ ರೈಲಿನಲ್ಲಿ ಹೋಗಿದ್ದು, ಗೋವಾದಲ್ಲಿ ರೈಲಿನಿಂದ ಇಳಿದು ಈತನು ಮುಂಬೈ ರೈಲನ್ನು ತಪ್ಪಿಸಿಕೊಂಡು ದಿನಾಂಕ: 31-08-2024 ರಂದು ಗೋವಾದಿಂದ ಹೊರಟು ಮಂಗಳೂರಿಗೆ ಬಂದು, ಪಡೀಲ್ ಅಳಪೆಯ ಅರಣ್ಯ ಭವನದ ಮುಂಭಾಗದಲ್ಲಿ ಒಂದು ಹೆಣ್ಣು ಮಗು ನಡೆದುಕೊಂಡು ಹೋಗುತ್ತಿದ್ದನ್ನು ನೋಡಿ, ತನಗೆ ಹೆಣ್ಣು ಮಕ್ಕಳಿಲ್ಲವೆಂದು ಆಸೆಯಿಂದ ಈ ಹೆಣ್ಣು ಮಗುವನ್ನು ಕರೆದುಕೊಂಡು ಹೋಗಿರುವುದಾಗಿದೆ.
ಪ್ರಕರಣದಲ್ಲಿ ಆರೋಪಿತನು ಮಂಗಳೂರು ಜಂಕ್ಷನ್ ನ ರೈಲು ನಿಲ್ದಾಣದಿಂದ ಕಾಸರಗೋಡು ಕಡೆಗೆ ಹೋಗುವ ರೈಲಿನಲ್ಲಿ ಹೋಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು, ಕಾಸರಗೋಡಿನ ರೈಲ್ವೇ ಪೊಲೀಸರಿಗೆ ಮಾಹಿತಿಯನ್ನು ನೀಡಿ, ತಕ್ಷಣ ಕಾರ್ಯ ಪ್ರವೃತ್ತರಾಗಿ ಕಂಕನಾಡಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿಗಳ ಮಾರ್ಗದರ್ಶನದಂತೆ ಪಿ.ಎಸ್.ಐ ಶಿವಕುಮಾರ.ಕೆ ಮತ್ತು ತಂಡವು ಕಾಸರಗೋಡಿಗೆ ತೆರಳಿ ಕಾಸರಗೋಡಿನ ರೈಲ್ವೇ ಪೊಲೀಸರ ಸಹಾಯದೊಂದಿಗೆ ಆರೋಪಿತನನ್ನು ಹಾಗೂ ಮಗುವನ್ನು ವಶಕ್ಕೆ ಪಡೆದುಕೊಂಡು ಮಗುವಿನ ತಂದೆ ತಾಯಿಯವರಿಗೆ ನೀಡಲಾಗಿದೆ. ನಂತರ ಈ ದಿನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿದೆ.
ಆರೋಪಿತರ ವಿವರ:
ಅನೀಶ್ ಕುಮಾರ್, ಪ್ರಾಯ: 49 ವರ್ಷ, ತಂದೆ: ಸೋಮನ್, ವಾಸ: ಕಂಡತ್ತಿಲ್, ಮುತ್ತುವಯಲ್, ತಾತಪಿಲ್ಲಿ, ಪರವೂರ್ ಅಂಚೆ, ತಾತಪಿಲ್ಲಿ, ಎರ್ನಾಕುಲಂ ಜಿಲ್ಲೆ, ಕೇರಳ ರಾಜ್ಯ. ಹಾಲಿ ವಾಸ: ಕೇರಾಫ್: ಜೇಲು ರವರ ಬಾಡಿಗೆ ಮನೆ, ವಾನಿಯಕ್ಕಾಡ್, ಕೊಟ್ಟುವಳ್ಳಿ ಗ್ರಾಮ, ವೇರ್ ಹೌಸ್ ಬಳಿ, ನಾರ್ತ್ ಪರವೂರ್, ಎರ್ನಾಕುಳಂ ಜಿಲ್ಲೆ, ಕೇರಳ ರಾಜ್ಯ ಆಗಿರುತ್ತದೆ.
ಆರೋಪಿತನ ಪತ್ತೆ ಕಾರ್ಯದಲ್ಲಿ ಭಾಗವಹಿಸಿದವರು:
ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್ ಐ.ಪಿ.ಎಸ್ ರವರ ಮಾರ್ಗದರ್ಶನದಂತೆ ಶ್ರೀ ಸಿದ್ದಾರ್ಥ್ ಗೋಯಲ್ (ಕಾ&ಸು) ಐ.ಪಿ.ಎಸ್ ಮತ್ತು ದಿನೇಶ್ ಕುಮಾರ್ ಕೆ.ಎಸ್.ಪಿ.ಎಸ್ ಮಾನ್ಯ ಉಪ-ಪೊಲೀಸ್ ಆಯುಕ್ತರು ಅಪರಾಧ ಹಾಗೂ ಸಂಚಾರ ರವರ ನಿರ್ದೇಶನದಂತೆ ಹಾಗೂ ಶ್ರೀಮತಿ ಧನ್ಯಾ ನಾಯಕ್ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ದಕ್ಷಿಣ ವಿಭಾಗರವರ ಸೂಚನೆಯಂತೆ ಕಂಕನಾಡಿ ನಗರ ಠಾಣೆಯ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಶಿವಕುಮಾರ, ಎ.ಎಸ್.ಐ ಅಶೋಕ್ ಹಾಗೂ ಸಿಬ್ಬಂಧಿಯವರಾದ ಅಶೀತ್ ಡಿ’ಸೋಜಾ, ಕುಶಾಲ್ ಹೆಗ್ಡೆ, ರಾಘವೇಂದ್ರ, ಪೂಜಾ ರವರು ಆರೋಪಿ ಕಾರ್ಯದಲ್ಲಿ ಭಾಗವಹಿಸಿದ್ದರು.