ನೇಣು ಬಿಗಿದು ನವವಿವಾಹಿತೆ ಆತ್ಮಹತ್ಯೆ
ಕೋಲಾರ: ಕೌಟುಂಬಿಕ ಕಲಹದಿಂದ ಬೇಸತ್ತು ನೇಣು ಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರ ಹೊರವಲಯದ ಸಹಕಾರ ನಗರದಲ್ಲಿ ನಡೆದಿದೆ.
ಸಹಕಾರ ನಗರದ ನಿವಾಸಿ ಮಾನಸ (24) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಒಂದು ವರ್ಷದ ಹಿಂದೆ ತಾಲೂಕಿನ ತೂರಾಂಡಹಳ್ಳಿಯ ಉಲ್ಲಾಸ್ ಗೌಡ ಹಾಗೂ ಮಾನಸ ವಿವಾಹವಾಗಿದ್ದರು. ಆದರೆ ಉಲ್ಲಾಸ್ ಗೌಡ ಕುಟುಂಬಸ್ಥರು ಮಾನಸಳಿಗೆ ವರದಕ್ಷಿಣೆ ವಿಚಾರವಾಗಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು.
ಈ ಬಗ್ಗೆ ಹಿಂದೆಯೂ ದೊಡ್ಡವರ ಸಮ್ಮುಖದಲ್ಲಿ ಎರಡು ಮೂರು ಪಂಚಾಯಿತಿ ರಾಜೀ ಸಂದಾನಗಳನ್ನು ನಡೆಸಿದ್ದರು. ಆದರೆ ರಾಜಿ ಸಂಧಾನ ಸಫಲವಾಗದ ಹಿನ್ನೆಲೆ, ವಿಚ್ಛೇದನಕ್ಕೆ ಅರ್ಜಿ ಹಾಕಿಕೊಳ್ಳಲಾಗಿತ್ತು.
ಪರಿಣಾಮ ಉಲ್ಲಾಸ್ ಗೌಡ ತನ್ನ ಪತ್ನಿ ಮಾನಸಳನ್ನು ತವರು ಮನೆಗೆ ಕಳುಹಿಸಿದ್ದ. ತದ ನಂತರ ಉಲ್ಲಾಸ್ ಗೌಡ ವಿಚ್ಛೇದನ ಪಡೆದುಕೊಳ್ಳುವ ಉದ್ದೇಶದಿಂದ ನೋಟಿಸ್ ಸಹ ವಕೀಲರ ಕಡೆಯಿಂದ ಪತ್ನಿಯ ಮನೆಗೆ ಕಳುಹಿಸಿದ್ದ. ಇದರಿಂದಲೇ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾನಸ ಕುಟುಂಬಸ್ಥರು ಅಳಲು ತೊಡಿಕೊಂಡಿದ್ದಾರೆ.




