ರಾಯಚೂರು: ಐದು ಘಂಟೆ ರೈಲು ವಿಳಂಬವಾಗಿದ್ದಕ್ಕೆ ರೈಲು ತಡೆದು ಪ್ರತಿಭಟನೆ
ರಾಯಚೂರು: ಲೋಕೋಪಯೋಗಿ ಇಲಾಖೆಯ ಪರೀಕ್ಷೆಗೆಂದು ಕಲಬುರಗಿಗೆ ತೆರಳುತ್ತಿದ್ದ ಪರೀಕ್ಷಾರ್ಥಿಗಳು ಐದು ಗಂಟೆ ವಿಳಂಬವಾಗಿದ್ದಕ್ಕೆ ರಾಯಚೂರು ಸಮೀಪ ರೈಲು ತಡೆದು ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.
ಮಂಗಳವಾರ ಲೋಕೋಪಯೋಗಿ ಇಲಾಖೆ (PWD AE ) ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕಳೆದ ಬಾರಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಆರೋಪದಿಂದ ಈ ಬಾರಿ ಬೆಂಗಳೂರು ಭಾಗದ ಅಭ್ಯರ್ಥಿಗಳಿಗೆ ಕಲಬುರಗಿಯಲ್ಲಿ, ಉತ್ತರ ಕರ್ನಾಟಕ ಭಾಗದವರಿಗೆ ಬೆಂಗಳೂರಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಯಲಹಂಕ ಬಳಿ ರೈಲು ಹಳಿ ದುರಸ್ತಿ ಕಾರ್ಯ ನಡೆದ ಹಿನ್ನೆಲೆಯಲ್ಲಿ ಸೊಲ್ಲಾಪುರ – ಯಶವಂತಪುರ, ಉದ್ಯಾನ್ ಎಕ್ಸ್ ಪ್ರೆಸ್ ಹಾಗೂ ಕರ್ನಾಟಕ ಎಕ್ಸ್ ಪ್ರೆಸ್ ನಾಲ್ಕರಿಂದ ಐದು ಗಂಟೆ ತಡವಾಗಿದೆ.
ಸೊಲ್ಲಾಪುರ ಎಕ್ಸ್ ಪ್ರೆಸ್ ಇನ್ನೂ ರಾಯಚೂರಿಗೂ ಬಂದಿಲ್ಲ. ಕಲಬುರಗಿ ತಲುವಷ್ಟರಲ್ಲಿ ಕನಿಷ್ಠ 11 ಗಂಟೆಯಾಗಲಿದೆ. ಮೂರು ರೈಲುಗಳಲ್ಲಿ ಏನಿಲ್ಲವೆಂದರೂ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ಪರೀಕ್ಷೆ ಮುಂದೂಡಬೇಕು ಎಂದು ಆಗ್ರಹಿಸಿ ಅಭ್ಯರ್ಥಿಗಳು ರಾಯಚೂರು ಸಮೀಪ ರೈಲಿನ ಚೈನ್ ಎಳೆದು ನಿಲ್ಲಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಬಂದ ರೈಲು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಲಾಗುತ್ತಿದೆ. ಸರ್ಕಾರ ಕೂಡಲೇ ನಮ್ಮ ಸಮಸ್ಯೆ ಸ್ಪಂದಿಸಬೇಕು ಇಲ್ಲವಾದರೆ ಹೋರಾಟ ಮುಂದುವರಿಸುವುದಾಗಿ ಹೇಳುತ್ತಿದ್ದಾರೆ.





