ಬಾಂಗ್ಲಾದೇಶ: ಶೇಕ್ ಹಸೀನಾ ಮನೆ ಮತ್ತು ಸಂಸತ್ತಿಗೆ ನುಗ್ಗಿದ ಪ್ರತಿಭಟನಾಕಾರರು: ಕೈಗೆ ಸಿಕ್ಕ ವಸ್ತುಗಳನ್ನು ಲೂಟಿ ಮಾಡಿದ ತಂಡ

ಬಾಂಗ್ಲಾದೇಶ: ದೇಶದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಇದರ ಬೆನ್ನಲ್ಲೇ ಪ್ರತಿಭಟನೆ ಭುಗಿಲೆದ್ದಿದ್ದು ಶೇಖ್ ಹಸೀನಾ ನಿವಾಸ ಗನಾಭಬಾನ್‌ಗೆ ಲಗ್ಗೆ ಇಟ್ಟಿದ್ದಾರೆ.
ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಪ್ರತಿಭಟನಾಕಾರರು ಅವರ ನಿವಾಸಕ್ಕೆ ಪ್ರವೇಶಿಸುತ್ತಿದ್ದಂತೆ ಹಸೀನಾ ದೇಶದಿಂದ ಪಲಾಯನ ಮಾಡಿದರು. ಪ್ರಧಾನಿಗಳ ಅಧಿಕೃತ ನಿವಾಸಕ್ಕೆ ನುಗ್ಗಿದ ಆಕ್ರೋಶಿತರ ಗುಂಪು ಕೈಗೆ ಸಿಕ್ಕ ವಸ್ತುಗಳನ್ನು ಬಾಚಿಕೊಂಡಿದೆ. ಸೀರೆ, ಕೋಳಿ, ಮೊಲ, ಟಿವಿ ಹೀಗೆ ತಮಗೆ ಏನೇನು ಸಿಗುತ್ತೋ ಎಲ್ಲವನ್ನೂ ಊಟಿ ಮಾಡಿದೆ. ಇದರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕೈಗೆ ಸಿಕ್ಕಿದ್ದನ್ನು ದೋಚಿರುವ ಪ್ರತಿಭಟನಾಕಾರರು ಶೇಖ್ ಹಸೀನಾ ಸೀರೆ, ಬಟ್ಟೆಗಳನ್ನೂ ಕದ್ದೊಯ್ದಿದ್ದಾರೆ. ಇನ್ನು ಕೆಲವರು ಪ್ರೆಸಿಡೆಂಟ್ ಪ್ಯಾಲೇಸ್‌ನ ದಿಂಬು, ಹಾಸಿಗೆ ಹೊದಿಕೆಯನ್ನೂ ಲೂಟಿ ಮಾಡಿದ್ದಾರೆ.
ಇಷ್ಟು ಮಾತ್ರವಲ್ಲದೇ ಇತ್ತ ಸಂಸತ್ತಿಗೂ ನುಗ್ಗಿರುವ ಗುಂಪು ಅಲ್ಲಿಯೂ ದಾಂಧಲೆ ಮಾಡಿದೆ. ಸಂಸತ್ತಿನಲ್ಲಿ ಪ್ರತಿಭಟನಾಕಾರರು ಮೇಜಿನ ಮೇಲೆ ಕುಳಿತು, ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಸಿಗರೇಟ್ ಸೇದುತ್ತಾ ಕುಳಿತಿದ್ದಾರೆ. ಮತ್ತೆ ಕೆಲವರು ಶೇಖ್ ಹಸೀನಾ ಮನೆಯಲ್ಲಿ ತಿಂಡಿಗಳನ್ನು ತಿನ್ನುತ್ತಾ ಆನಂದಿಸುತ್ತಿರುವುದು ಪರಿಸ್ಥಿತಿಯ ತೀವ್ರತೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ. ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ ಹೈ ಅಲರ್ಟ್ ಘೋಷಿಸಿದೆ.