ಬೆಳ್ತಂಗಡಿ: ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್ ನ ಆಡಳಿತ ಮಂಡಳಿ ವಜಾ ಆದೇಶಕ್ಕೆ ಹೈಕೋರ್ಟ್ ತಡೆ
ಬೆಳ್ತಂಗಡಿ : ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್ ನ ಆಡಳಿತ ಮಂಡಳಿ ವಜಾ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಿಯಮಾವಳಿ (ಬೈಲಾ) ಅಂಗೀಕರಿಸಿಲ್ಲ. ಲೆಕ್ಕ ಪರಿಶೋಧಕರಿಗೆ ಲೆಕ್ಕ ಪತ್ರ ಪ್ರಸ್ತುತಪಡಿಸಿಲ್ಲ ಹಾಗೂ ಆಡಳಿತ ಮಂಡಳಿಯನ್ನು ರಚಿಸಿ ಅದಕ್ಕೆ ವಕ್ಫ್ ಮಂಡಳಿಯಿಂದ ಅಂಗೀಕಾರ ಪಡೆಯದೆ, ಸ್ವಯಂ ಘೋಷಿತ ಸಮಿತಿ ರಚಿಸಿಕೊಂಡಿದ್ದಾಗಿ ದೂರು ಕೇಳಿ ಬಂದಿತ್ತು.
ಹೀಗಾಗಿ, ಚಾರ್ಮಾಡಿ ಜಲಾಲಿಯಾ ನಗರ ಮುಹ್ಯುದ್ದೀನ್ ಜುಮ್ಮಾ ಮಸ್ಟಿದ್‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿ ರಾಜ್ಯ ವಕ್ಫ್ ಮಂಡಳಿ ಆದೇಶ ನೀಡಿತ್ತು. ಈ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಅಲ್ಲದೆ, ಈ ಹಿಂದಿನಂತೆ ಯಥಾಸ್ಥಿತಿ ಕಾಪಾಡುವಂತೆ ತೀರ್ಪು ನೀಡಿದೆ. ಹೈಕೋರ್ಟ್ ನ್ಯಾಯಾಧೀಶ ಹೇಮಂತ್ ಚಂದನಗೌಡರ್ ಅವರು ಈ ತಡೆ ತೀರ್ಪು ಪ್ರಕಟಿಸಿದ್ದರು. ಜಮಾಅತ್ ಪರವಾಗಿ ಹೈಕೋರ್ಟ್ ನ್ಯಾಯವಾದಿ ಲತೀಫ್ ವಾದಿಸಿದ್ದರು. ಅಂದು ವಕ್ಫ್ ಆದೇಶದ ಹಿನ್ನೆಲೆಯಲ್ಲಿ ಜೂನ್ 1 ರಂದು ಮಸ್ಟಿದ್ ಗೆ ಭೇಟಿ ನೀಡಿದ್ದ ವಕ್ಫ್ ಜಿಲ್ಲಾ ಅಧಿಕಾರಿ ಅಬೂಬಕ್ಕರ್ ಅವರ ನೇತೃತ್ವದ ನಿಯೋಗ ಮಸ್ಜಿದ್‌ನ ಸೂಚನಾ ಫಲಕದಲ್ಲಿ ಆದೇಶ ಜಾರಿಗೊಳಿಸಿದ್ದರು. ವಕ್ಫ್ ಮಂಡಳಿಯಿಂದ ನೂತನ ಆಡಳಿತಾಧಿಕಾರಿ ನೇಮಕವಾದ ಬಗ್ಗೆಯೂ ಅಧಿಕೃತ ಮಾಹಿತಿ ನೀಡಿದ್ದರು.
ವಕ್ಫ್ ಆದೇಶದಂತೆ ಆಡಳಿತಾಧಿಕಾರಿ ನೇಮಿಸಿದ್ದರೂ ಅಂದು ನೋಟೀಸು ಜಾರಿಗೊಳಿಸಿದ ಬಳಿಕ ಇದುವರೆಗೆ ಅಧಿಕಾರಿ ಮಟ್ಟದಲ್ಲಿ ಯಾವುದೇ ಕಾರ್ಯ ಚಟುವಟಿಕೆ ಮಸ್ಜಿದ್ ನಲ್ಲಿ ನಡೆದಿರಲಿಲ್ಲ. ಉಸ್ತಾದರುಗಳಿಗೆ ಸಂಬಳ ಪಾವತಿ, ಆಡಳಿತ ನಿರ್ವಹಣೆ, ಶುಕ್ರವಾರದ ಊಟದ ವ್ಯವಸ್ಥೆ, ವಂತಿಗೆ ವಸೂಲಿ, ಇತ್ಯಾದಿ ಯಾವುದೇ ವಿಚಾರದಲ್ಲೂ ಇಲಾಖೆ ತಲೆಹಾಕಿರಲಿಲ್ಲ. ಇದರಿಂದಾಗಿ ಎರಡು ತಿಂಗಳಿನಿಂದ ಮಸ್ಜಿದ್ ನ ಎಲ್ಲಾ ವ್ಯವಹಾರಗಳು ಸ್ಥಗಿತಗೊಂಡಿದ್ದವು.





