ಕಾರವಾರ: ಮನೆಯ ಹಿಂಭಾಗದ ಗುಡ್ಡ ಕುಸಿದು ಬಿದ್ದು ಪತಿ ಮೃತ್ಯು, ಪತ್ನಿ ಅಪಾಯದಿಂದ ಪಾರು
ಕಾರವಾರ : ಭಾರಿ ಮಳೆಯಿಂದ ಮನೆ ಹಿಂಭಾಗದ ಗುಡ್ಡ ಕುಸಿದು ಮನೆಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದರೆ, ಆತನ ಪತ್ನಿ ಪ್ರಾಣಪಪಾಯದಿಂದ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಿನ್ನರದಲ್ಲಿ ಮಂಗಳವಾರ ನಡೆದಿದೆ.
ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ.
ಕಿನ್ನರದ ಗ್ರಾಮದ ತಿಕರ್ಸ್ ಗುರವ (60) ಮೃತಪಟ್ಟ ವ್ಯಕ್ತಿ. ಬೆಳಗ್ಗೆ ಮನೆಯಲ್ಲಿ ಇದ್ದಾಗ ಮನೆಯ ಹಿಂಭಾಗದ ಗುಡ್ಡ ಏಕಾಏಕಿ ಕುಸಿದು ಬಿದ್ದಿದೆ. ಇದೇ ವೇಳೆ ವಿದ್ಯುತ್ ಲೈನ್ ಸಹಿತ ಬೃಹತ್ ಮರಗಳು ಮನೆ ಮೇಲೆ ಬಿದ್ದಿವೆ.
ಹೆಂಡತಿ ಹಾಗೂ ಅಕ್ಕಪಕ್ಕದ ಮನೆಯವರು ಕೂಗಿ ಕರೆಯುವ ವೇಳೆಗೆ ಗಿಡ ಮರಗಳ ಸಹಿತ ಮನೆ ಮೇಲೆ ಬಿದ್ದು, ಸಂಪೂರ್ಣ ಮನೆ ಕುಸಿದು ತಿಕರ್ಸ್ ಗುರವ ಮಣ್ಣಿನಡಿ ಸಿಲುಕಿದ್ದರು. ಅದೃಷ್ಟವಶಾತ್ ಹೆಂಡತಿ ಮನೆಯಿಂದ ಹೊರಗೆ ಇದ್ದುದರಿಂದ ಬಚಾವ್ ಆಗಿದ್ದಾರೆ.