ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮ್ಮಿಕೊಂಡಿದ್ದ ಚುನಾವಣಾ ರ‍್ಯಾಲಿಯಲ್ಲಿ ಗುಂಡಿನ ದಾಳಿ
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವ ಯತ್ನ ನಡೆದಿದೆ. ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಹಮ್ಮಿಕೊಂಡಿದ್ದ ಚುನಾವಣಾ ರ‍್ಯಾಲಿಯಲ್ಲಿ ಗುಂಡಿನ ದಾಳಿ ನಡೆದಿದೆ. ಕೂದಲೆಳೆಯ ಅಂತರದಲ್ಲಿ ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶನಿವಾರ ಸಂಜೆ 6.15ರ ಸುಮಾರಿಗೆ ಹಮ್ಮಿಕೊಂಡಿದ್ದ ಚುನಾವಣಾ ರ‍್ಯಾಲಿಯಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಟ್ರಂಪ್ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಶಂಕಿತ ಬಂದೂಕುಧಾರಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ.
ಶಂಕಿತ ಬಂದೂಕುಧಾರಿ ಒಂದಕ್ಕಿಂತ ಹೆಚ್ಚು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ತಕ್ಷಣವೇ ಟ್ರಂಪ್ ವೇದಿಕೆಯ ಕೆಳಗಡೆ ಕುಳಿತುಕೊಳ್ಳುವ ಮೂಲಕ ಮತ್ತಷ್ಟು ದಾಳಿಯಿಂದ ಪಾರಾಗುತ್ತಾರೆ. ಆದರೂ ಟ್ರಂಪ್ ಅವರ ಬಲ ಕಿವಿಯ ಭಾಗಕ್ಕೆ ಗುಂಡೇಟು ತಗುಲಿದೆ.





