ಇಷ್ಟಪಡುತ್ತಿದ್ದ ಹುಡುಗಿ ಜೊತೆ ಮದುವೆ ಮಾಡಿಸುವುದಾಗಿ ಹೇಳಿ ಶೆಡ್‌ಗೆ ಕರೆಸಿ ಯುವಕನ ಹತ್ಯೆ
ಹಾವೇರಿ: ಇಷ್ಟಪಡುತ್ತಿದ್ದ ಹುಡುಗಿ ಜೊತೆ ಮದುವೆ ಮಾಡಿಸುವುದಾಗಿ ಹೇಳಿ ಶೆಡ್‌ಗೆ ಕರೆಸಿಕೊಂಡು ಹತ್ಯೆ ಮಾಡಿ ಕಾರು ಸಮೇತ ಮೃತದೇಹ ಸುಟ್ಟಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಹಾನಗಲ್ ಠಾಣೆ ಪೊಲೀಸರು, ಏಳು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಶಿವಮೊಗ್ಗದ ಶಿರಾಳಕೊಪ್ಪ ಠಾಣೆ ವ್ಯಾಪ್ತಿಯ ತೊಗರ್ಸಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವೀರೇಶ (27) ಎಂಬುವರ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರು, ಹಲವರ ಹೇಳಿಕೆ ಹಾಗೂ ಇತರೆ ಪುರಾವೆಗಳನ್ನು ದೋಷಾರೋಪ ಪಟ್ಟಿ ಜೊತೆ ಲಗತ್ತಿಸಿದ್ದಾರೆ.
‘ವೀರೇಶ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಶಿರಾಳಕೊಪ್ಪ ಪೊಲೀಸರು, ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ಹಾನಗಲ್ ಠಾಣೆಗೆ ವರ್ಗಾಯಿಸಿದ್ದರು. ನಂತರ, ಅಕ್ಕಿಆಲೂರಿನ ಯುವತಿಯ ಇಬ್ಬರು ಸಹೋದರರು, ತಂದೆ ಚಿಕ್ಕಪ್ಪ ಹಾಗೂ ಮೂವರು ಕಾರ್ಮಿಕರನ್ನು ಬಂಧಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.





