ರಫಾ ಮೇಲೆ ಇಸ್ರೇಲ್ ದಾಳಿ: ಸಾಮಾಜಿಕ ಜಾಲತಾಣದಲ್ಲಿ “ALL EYES ON RAFAH” ಫೋಟೋ ವೈರಲ್
ದೆಹಲಿ: ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧ ಮುಂದುವರೆದಿರುವಂತೆಯೇ, ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಎಕ್ಸ್ ಸೇರಿದಂತೆ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿ “ALL EYES ON RAFAH” ಎನ್ನುವ ಫೋಟೋ ವು ವೈರಲ್ ಆಗಿದೆ.
ದಕ್ಷಿಣ ಗಾಝಾ ನಗರವಾದ ರಫಾ ಮೇಲೆ ಇಸ್ರೇಲ್ ನಡೆಸುತ್ತಿರುವ ವಾಯು ದಾಳಿಯ ವಿರುದ್ಧ ಜಗತ್ತಿನಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಇದೀಗ ವಿಶ್ವಾದ್ಯಂತ ‘All eyes on Rafah’ ಅಭಿಯಾನವು ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮರ ಪತ್ನಿ ರಿತಿಕಾ ಶರ್ಮ ಕೂಡಾ ‘ಆಲ್ ಐಸ್ ಆನ್ ರಫಾ’ ಪೋಸ್ಟರನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು, ನಂತರ ಅಳಿಸಿ ಹಾಕಿದ್ದರು.
ನಟ ವರುಣ್ ಧವನ್, ನಟಿಯರಾದ ಮಾಧುರಿ ದೀಕ್ಷಿತ್, ಹನ್ಸಿಕಾ ಮೋಟ್ವಾನಿ, ಇಲಿಯಾನಾ ಡಿ’ಕ್ರೂಝ್, ಸೋನಂ ಕಪೂರ್, ರಾಕುಲ್ ಪ್ರೀತ್ ಸಿಂಗ್, ತೃಪ್ತಿ ದಿಮ್ರಿ ಹಾಗೂ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್, ಕಾಮಿಡಿಯನ್ ವೀರ್ ದಾಸ್, ರಶ್ಮಿಕಾ ಮಂದಣ್ಣ, ದುಲ್ಕರ್ ಸಲ್ಮಾನ್, ಟೊಮಿನೋ ಥೋಮಸ್, ನಿಕಿಲಾ ವಿಮಲ್ ಹೀಗೆ ಹಲವಾರು ಸೆಲೆಬ್ರಿಟಿ ಗಳು ಅಭಿಯಾನ ದಲ್ಲಿ ತೊಡಗಿಸಿಕೊಂಡಿದ್ದು, 35 ಮಿಲಿಯನ್ ಗಿಂತಲೂ ಅಧಿಕ ಜನರು ಪೋಸ್ಟರನ್ನು ಹಂಚಿಕೊಂಡು, ಗಾಝಾದಲ್ಲಿನ ಫೆಲೆಸ್ತೀನಿಯನ್ನರ ಪರ ತಮ್ಮ ಬೆಂಬಲ ಸೂಚಿಸಿದ್ದಾರೆ.
ತನ್ನ ಮಿತ್ರ ರಾಷ್ಟ್ರವಾದ ಅಮೆರಿಕದ ಎಚ್ಚರಿಕೆ ಹಾಗೂ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿಗೂ ಕವಡೆ ಕಾಸಿನ ಕಿಮ್ಮತ್ತು ನೀಡದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಗಾಝಾ ಮೇಲಿನ ಆಕ್ರಮಣವನ್ನು ಮುಂದುವರಿಸಿದ್ದಾರೆ. ನೆತನ್ಯಾಹು ಅವರ ಈ ನಡೆಯು ಜಾಗತಿಕ ಮಟ್ಟದಲ್ಲಿ ವ್ಯಾಪಕ ಖಂಡನೆಗೊಳಗಾಗಿದೆ.
‘ಆಲ್ ಐಸ್ ಆನ್ ರಾಫಾ’ ಚಿತ್ರವು ಗಾಝಾದ ದಕ್ಷಿಣದಲ್ಲಿರುವ ರಾಫಾ ನಗರದ ನಿರಾಶ್ರಿತರ ಶಿಬಿರದಲ್ಲಿ ಡೇರೆಗಳನ್ನು ತೋರಿಸುತ್ತದೆ, ಅಲ್ಲಿ ಇಸ್ರೇಲ್ನಿಂದ ನಡೆಯುತ್ತಿರುವ ದಾಳಿಯ ನಂತರ ಅನೇಕ ಫೆಲೆಸ್ತೀನೀಯರು ಸ್ಥಳಾಂತರಗೊಂಡಿದ್ದಾರೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಭಾನುವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 45 ನಾಗರಿಕರು ಸಾವನ್ನಪ್ಪಿದ್ದಾರೆ.