September 8, 2024

ಎಸ್ಸೆಸ್ಸೆಲ್ಸಿ ಫಲಿತಾಂಶ:  ಎರಡನೇ ಸ್ಥಾನಕ್ಕೆ ಜಿಗಿದ ದ.ಕ ಜಿಲ್ಲೆ

0

ಮಂಗಳೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನಕ್ಕೆ‌‌ ಜಿಗಿದಿದೆ.

ಜಿಲ್ಲೆಯ ಒಟ್ಟು ಫಲಿತಾಂಶ ಶೇ 92.12ರಷ್ಟಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 29,701 ವಿದ್ಯಾರ್ಥಿಗಳಲ್ಲಿ 27,360 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಳೆದ ವರ್ಷ ಜಿಲ್ಲೆಯ ಒಟ್ಟು ಫಲಿತಾಂಶ ‌ ಶೇ 89.47 ಆಗಿದ್ದು, ರಾಜ್ಯದಲ್ಲಿ 17ನೇ ಸ್ಥಾನದಲ್ಲಿತ್ತು. 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ 20ನೇ ಸ್ಥಾನದಲ್ಲಿತ್ತು.

ದ್ವಿತೀಯ ‌ಪಿಯುಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವ ಜಿಲ್ಲೆಯಲ್ಲಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರತಿ ಬಾರಿ ಕುಸಿತವಾಗುತ್ತಿದೆ ಎಂಬ ಸಾರ್ವತ್ರಿಕ ಆರೋಪ ಇತ್ತು. ಈ ಬಾರಿ ಈ ಆರೋಪದಿಂದ ಜಿಲ್ಲೆ ಮುಕ್ತವಾಗಿದೆ.

‘ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ನಿರಂತರ ಪ್ರಯತ್ನ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಆರಂಭದಲ್ಲೇ ತರಬೇತಿ ನೀಡಿರುವುದು, ವಿಷಯ ಪರಿಣಿತ ಶಿಕ್ಷಕರು ಗರಿಷ್ಠ ಅಂಕ ಗಳಿಕೆಗೆ ಸಲಹೆ, ಮಾರ್ಗದರ್ಶನ ಮಾಡಿರುವುದು ಪರೀಕ್ಷಾ ಫಲಿತಾಂಶದಲ್ಲಿ ಪ್ರತಿಫಲನಗೊಂಡಿದೆ. ಈ ಬಾರಿ ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ಪ್ರಯೋಗ ಮಾಡಲಾಗಿತ್ತು. ಮಕ್ಕಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಬರೆದಿದ್ದರು’ ಎಂದು ಡಿಡಿಪಿಐ ವೆಂಕಟೇಶ ಪಟಗಾರ್ ಪ್ರತಿಕ್ರಿಯಿಸಿದರು.

Leave a Reply

Your email address will not be published. Required fields are marked *

error: Content is protected !!