ಬಂಟ್ವಾಳ: ಸರಪಾಡಿ- ಮಾವಿನಕಟ್ಟೆಯಲ್ಲಿ ಕಾಣಿಸಿಕೊಂಡ ಚಿರತೆ: ಗ್ರಾಮಸ್ಥರ ಆತಂಕ
ಬಂಟ್ವಾಳ: ಕಳೆದ ಕೆಲವು ದಿನಗಳಿಂದ ಸರಪಾಡಿ ಗ್ರಾಮದ ಕಟ್ಟೆರಸ್ತೆ ಬಳಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ರವಿವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ರಸ್ತೆಯಲ್ಲಿ ಸಂಚರಿಸುವವರಿಗೆ ನಾಲ್ಕು ಬಾರಿ ಚಿರತೆ ಕಾಣಸಿಕ್ಕಿದೆ ಎನ್ನಲಾಗಿದೆ.
ಸರಪಾಡಿ- ಮಾವಿನಕಟ್ಟೆ ರಸ್ತೆ ಮಧ್ಯೆ ಕಟ್ಟೆರಸ್ತೆ ಎಂಬ ಪ್ರದೇಶವಿದ್ದು, ಈ ಭಾಗದಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿದೆ. ಈ ಭಾಗದಲ್ಲಿ ಅರಣ್ಯ ಇಲಾಖೆಯ ಗೇರು ನೆಡುತೋಪು ಇದ್ದು, ಅಲ್ಲಿಂದ ರಸ್ತೆ ದಾಟಿ ಮತ್ತೊಂದು ಬದಿಗೆ ಸಾಗುತ್ತಿರುವುದು ಕಂಡುಬಂದಿದೆ.
ಈ ಭಾಗವು ನಿರ್ಜನ ಪ್ರದೇಶವಾಗಿದ್ದು, ದ್ವಿಚಕ್ರ ವಾಹನಗಳಲ್ಲಿ ಏಕಾಂಗಿಯಾಗಿ ಹೋಗುವ ಸಂದರ್ಭ ಚಿರತೆ ತೊಂದರೆ ಮಾಡಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಸಂಬಂಧಿಸಿ ಅರಣ್ಯ ಇಲಾಖೆ ಬೋನು ಇರಿಸಿ ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.




