ಮಾದಕ ದ್ರವ್ಯ ಸೇವನೆ ದೃಢ: ಫುಕೆಟ್-ದಿಲ್ಲಿ ವಿಮಾನದ ಪೈಲಟ್‌ನನ್ನು ವಜಾಗೊಳಿಸಿದ ಏರ್ ಇಂಡಿಯಾ
ನವದೆಹಲಿ: ಫುಕೆಟ್ನಿಂದ ದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನ ಆಕಾಶದಲ್ಲೇ ಪಲ್ಟಿಯಾಗಿ 300 ಅಡಿ ಕೆಳಗೆ ಜಾರಿತ್ತು. ಇದರಿಂದ ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಈ ಘಟನೆಯ ಬಳಿಕ ವೈದ್ಯಕೀಯ ತಪಾಸಣೆಯಲ್ಲಿ ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಆಗಸ್ಟ್ 4ರಂದು ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕ ವಾಯುಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ಶಿಫಾರಸು ಮಾಡಿದ ಕೆಲವೇ ಗಂಟೆಗಳ ನಂತರ ಏರ್ ಇಂಡಿಯಾ ಪೈಲಟ್‌ನನ್ನು ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಆಗಸ್ಟ್ 4 ರಂದು ಫುಕೆಟ್‌ನಿಂದ ದಿಲ್ಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾದ ಏರ್‌ಬಸ್ ಎಐ2379 ವಿಮಾನವು 36,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ಏಕಾಏಕಿ ಒತ್ತಡ ಕಳೆದುಕೊಂಡಿತ್ತು.
ವಿಮಾನದಲ್ಲಿ 137 ಪ್ರಯಾಣಿಕರು, ಮೂರು ಶಿಶುಗಳು, ಆರು ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳಿದ್ದರು. ವಿಮಾನವು ಇದ್ದಕ್ಕಿದ್ದಂತೆ ಕುಲುಕಾಡಿದ ಪರಿಣಾಮ 20 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದರು. ವಿಮಾನವು ದಿಲ್ಲಿಯಲ್ಲಿ ಸುರಕ್ಷಿತವಾಗಿ ಇಳಿದ ಬಳಿಕ ಪೈಲಟ್‌ಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಪೈಲಟ್-ಇನ್-ಕಮಾಂಡ್ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ.
ಏರ್ ಇಂಡಿಯಾದ ಶೂನ್ಯ-ಸಹಿಷ್ಣುತೆ ನೀತಿಯಡಿ ಪೈಲಟ್‌ನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಸಂಸ್ಥೆಯು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.





