ಉಳ್ಳಾಲ:ರಾಜೇಶ್ ಕೋಟ್ಯಾನ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ: ಲೇಡಿ ಸಿಂಗಮ್ ಎಸೈ ಭಾರತೀ ತಲೆದಂಡ ನಡೆದ ಪ್ರಕರಣವಾಗಿತ್ತು.
ಉಳ್ಳಾಲ: ಉಳ್ಳಾಲದ ಮೊಗವೀರ ಪಟ್ಣ ನಿವಾಸಿ ರಾಜೇಶ್ ಕೋಟ್ಯಾನ್ ಯಾನೆ ರಾಜು ಕೋಟ್ಯಾನ್ ಎಂಬವರ ಕೊಲೆ ನಡೆಸಿದ್ದ ನಾಲ್ಕು ಮಂದಿ ಆರೋಪಿಗಳಿಗೆ ಮಂಗಳೂರಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಉಳ್ಳಾಲ ಮೊಗವೀರಪಟ್ಣ ನಿವಾಸಿ ರಾಜೇಶ್ ಕೋಟ್ಯಾನ್ ಯಾನೆ ರಾಜು ಕೋಟ್ಯಾನ್ ಎಂಬವರನ್ನು 2016 ಎಪ್ರಿಲ್ 12 ರಂದು ಆರೋಪಿಗಳು ಬೆಳಗ್ಗಿನ ಜಾವ ಉಳ್ಳಾಲ ಕೋಟೆಪುರ ಬರಕಾ ಓವರ್ ಸೀಸ್ ಫ್ಯಾಕ್ಟರಿಯ ಬಳಿ ಮರದ ಕಟ್ಟಿಗೆಗಳಿಂದ ಹೊಡೆದು ಮುಖಕ್ಕೆ ಕಲ್ಲು ಎತ್ತಿ ಹಾಕಿ ಜಜ್ಜಿ ಕೊಲೆ ಮಾಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ ನಂ: 208/2016 ಕಲಂ: 302, 201 ಐಪಿಸಿ ಯಂತೆ ಪ್ರಕರಣ ದಾಖಲಾಗಿತ್ತು.
ಘಟನೆ ಗೆ ಸಂಬಂಧಿಸಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳಾದ ಮೊಹಮ್ಮದ್ ಆಸೀಫ್ ಯಾನೆ ಆಚಿ, ಮೊಹಮ್ಮದ್ ಸುಹೈಲ್, ಅಬ್ದುಲ್ ಮುತಾಲಿಫ್ ಯಾನೆ ಮುತ್ತು, ಅಬ್ದುಲ್ ಅಸ್ವೀರ್ ಯಾನೆ ಅಚ್ಚು ಎಂಬವರನ್ನು ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ದಸ್ತಗಿರಿ ಮಾಡಿ ಪ್ರಕರಣವನ್ನು ಭೇದಿಸಿದ್ದರು. ಪ್ರಕರಣದ ತನಿಖೆಯನ್ನು ಉಳ್ಳಾಲ ಠಾಣೆಯ ಪ್ರಭಾರಿಯಾಗಿದ್ದ ಅಂದಿನ ಕೊಣಾಜೆ ಪೊಲೀಸ್ ಠಾಣೆಯ ನಿರೀಕ್ಷಕರಾಗಿದ್ದ ಅಶೋಕ್ ಪಿ. ನಡೆಸಿದ್ದು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಮುಖ ನಾಲ್ಕು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25,000/- ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ. ಸರಕಾರದ ಪರವಾಗಿ ಹಿರಿಯ ಸರಕಾರಿ ಅಭಿಯೋಜಕರಾದ ಜುಡಿತ್ ವೋಲ್ಗಾ ಮಾರ್ಗರೇಟ್ ಕ್ರಾಸ್ತ ವಾದವನ್ನು ಮಂಡಿಸಿದ್ದರು.
ಲೇಡಿ ಸಿಂಗಮ್ ಭಾರತಿ ತಲೆದಂಡ
2016 ರಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಖಾಯಂ ಇನ್ಸ್ ಪೆಕ್ಟರ್ ನಿಯೋಜನೆಗೊಂಡಿರಲಿಲ್ಲ. ಈ ಅವಧಿಯಲ್ಲಿ ಲೇಡಿ ಸಿಂಗಂ ಖ್ಯಾತಿಯ ಪಿಎಸ್ ಐ ಭಾರತಿ ಅವರೇ ಠಾಣೆಯ ಹೊಣೆ ಹೊತ್ತುಕೊಂಡಿದ್ದರು. ಭಾರತಿ ಅವರಿಗೆ ಅಂದಿನ ರಾಜ್ಯ ಸರಕಾರ ಮುಖ್ಯಮಂತ್ರಿ ಪದಕ ನೀಡಿದ್ದ ಫ್ಲೆಕ್ಸ್ ಗಳು ಉಳ್ಳಾಲ ನಗರದಾದ್ಯಂತ ರಾರಾಜಿಸುತ್ತಿದ್ದವು. ಇಂತಹ ಅಧಿಕಾರಿ ಇದ್ದರೂ ಠಾಣೆಯ ಕೂಗಳತೆಯ ರಸ್ತೆ ಬದಿಯಲ್ಲೇ ಅಮಾಯಕ ರಾಜು ಕೋಟ್ಯಾನ್ ಕೊಲೆಯಾಗಿ ಬಿದ್ದುದರ ವಿರುದ್ಧ ಮೊಗವೀರ ಸಮಾಜವು ಆಕ್ರೋಶಗೊಂಡು ರಾಜು ಕೋಟ್ಯಾನ್ ಅವರ ಶವವನ್ನ ಜಿಲ್ಲೆಯ ಇತಿಹಾಸದಲ್ಲೇ ಮೊದಲೆಂಬಂತೆ ಉಳ್ಳಾಲ ಪೊಲೀಸ್ ಠಾಣೆಯ ಮೆಟ್ಟಿಲಲ್ಲಿಟ್ಟು ಪ್ರತಿಭಟನೆ ನಡೆಸಿತ್ತು. ಅಲ್ಲದೆ, ಪಿಎಸ್ಐ ಭಾರತಿಯನ್ನ ಅಮಾನತುಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದರು. ನಗರದೆಲ್ಲೆಡೆ ಭಾರತಿ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದಕ್ಕೆ ಶುಭಕೋರಿ ಹಾಕಲಾಗಿದ್ದ ಫ್ಲೆಕ್ಸ್ ಗಳನ್ನ ಪ್ರತಿಭಟನಾಕಾರರು ಕಿತ್ತೆಸೆದಿದ್ದರು. ದಿನಗಳ ಅಂತರದಲ್ಲಿ ರಾಜು ಕೋಟ್ಯಾನ್ ಹತ್ಯೆಗೆ ಪ್ರತೀಕಾರವಾಗಿ ತೊಕ್ಕೊಟ್ಟಿನಲ್ಲಿ ಸಫ್ವಾನ್ ಹತ್ಯೆ ನಡೆದಿತ್ತು. ಆ ಸಮಯದಲ್ಲಿ ಉಳ್ಳಾಲದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟ ಪರಿಣಾಮ ಎಸ್ಐ ಭಾರತಿಯವರನ್ನ ತಕ್ಷಣವೇ ರಜೆಯಲ್ಲಿ ಕಳುಹಿಸಿ ತಲೆದಂಡ ಮಾಡಲಾಗಿತ್ತು.






