ಬಂಟ್ವಾಳ: ನಾಸಿರ್ ಕೊಲೆ ಪ್ರಕರಣದ ವಿಚಾರಣೆ ಪೂರ್ಣ: ಆರೋಪ ಸಾಬೀತು, ಎ.16ರಂದು ತೀರ್ಪು ಪ್ರಕಟ
ಮಂಗಳೂರು: 2015ರ ನಾಸಿರ್ ಕೊಲೆ ಪ್ರಕರಣ ಆರೋಪಿಗಳ ಮೇಲಿನ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣವನ್ನು ಎ.16ರಂದು ಪ್ರಕಟಿಸುವುದಾಗಿ ಕೋರ್ಟ್ ತಿಳಿಸಿದೆ.
2015ರ ಆ.5ರಂದು ರಾತ್ರಿ 4-5 ಮುಸ್ಲಿಂ ಸಮುದಾಯದ ಯುವಕರು ಬಂಟ್ವಾಳ ತಾಲೂಕಿನ ಕೊಳ್ನಾಡ್ ಗ್ರಾಮದ ಆಲಬೆಯಲ್ಲಿ ವಿಜೇತ್ ಕುಮಾರ್ ಮತ್ತು ಅಭಿ ಯಾನೆ ಅಭಿಜಿತ್ ಮೇಲೆ ಹಲ್ಲೆ ನಡೆಸಿದ್ದರು.
ಇದರ ಮನಸ್ತಾಪಗೊಂಡಿದ್ದ ಆರೋಪಿಗಳು ಮುಸ್ಲಿಂ ಯುವಕರನ್ನು ಹತ್ಯೆ ಮಾಡಲು ಸಂಚು ನಡೆಸಿದ್ದರು. ಅದರಂತೆ 2015ರ ಆ.6ರಂದು ಮುಹಮ್ಮದ್ ಮುಸ್ತಫ ಮತ್ತು ಮುಹಮ್ಮದ್ ನಾಸೀರ್ ಅವರು ಮೆಲ್ಕಾರ್‌ನಿಂದ ಮುಡಿಪು ಕಡೆಗೆ ಆಟೊ ರಿಕ್ಷಾದಲ್ಲಿ ಬರುತ್ತಿದ್ದಾಗ ಆರೋಪಿಗಳಾದ ವಿಜೇತ್ ಕುಮಾರ್, ಕಿರಣ್, ಅನೀಶ್ ಆಲಿಯಾಸ್ ಧನು, ಅಭಿ ಯಾನೆ ಅಭಿಜಿತ್ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ರಾತ್ರಿ ಸುಮಾರು 10:45ಕ್ಕೆ ಸಜಿಪ ಮೂಡ ಗ್ರಾಮದ ಕೊಳಕೆ ಎಂಬಲ್ಲಿ ಆಟೋರಿಕ್ಷಾ ತಡೆದು ನಿಲ್ಲಿಸಿ ತಲವಾರಿನಿಂದ ಹಲ್ಲೆ ನಡೆಸಿದ್ದರು.
ಇದರಿಂದ ಮುಹಮ್ಮದ್ ಮುಸ್ತಫ ಮತ್ತು ಮುಹಮ್ಮದ್ ನಾಸಿರ್ ಗಾಯಗೊಂಡಿದ್ದರು. ಮುಹಮ್ಮದ್ ನಾಸಿರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇನ್‌ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
29 ಸಾಕ್ಷಿದಾರರನ್ನು ವಿಚಾರಿಸಿ 40 ದಾಖಲೆಗಳನ್ನು ಗುರುತಿಸಲಾಗಿದೆ. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಎಚ್.ಎಸ್. ಆರೋಪಿಗಳು ದೋಷಿಗಳೆಂದು ಸೋಮವಾರ ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣದ ಮೇಲಿನ ವಿಚಾರಣೆಯನ್ನು ಎ.16ಕ್ಕೆ ನಿಗದಿಪಡಿಸಲಾಗಿದೆ. ಸರಕಾರದ ಪರವಾಗಿ ಶೇಖರ ಶೆಟ್ಟಿ ವಿಚಾರಣೆ ನಡೆಸಿದ್ದು, ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದರು.




