ವಿಟ್ಲ: ರಸ್ತೆ ಬದಿಯಲ್ಲಿ ಅಕ್ರಮ ಹಣ್ಣು ವ್ಯಾಪಾರ: ವಿಟ್ಲ ವ್ಯಾಪಾರಿಗಳಿಂದ ಪಂಚಾಯತ್ ಗೆ ಮುತ್ತಿಗೆ
ವಿಟ್ಲ: ರಸ್ತೆ ಬದಿ ಅನಧಿಕೃತ ತರಕಾರಿ ಹಣ್ಣು ವ್ಯಾಪಾರ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಳ್ಳದ ಬಗ್ಗೆ ವಿಟ್ಲ ಪಟ್ಟಣ ಪಂಚಾಯತಿ ವ್ಯಾಪ್ತಿಯ ಅಧಿಕೃತ ತರಕಾರಿ ಮತ್ತು ಹಣ್ಣು ವ್ಯಾಪಾರಸ್ಥರು ಸೋಮವಾರ ಪಟ್ಟಣ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದರು.
ವಿಟ್ಲ ಪೇಟೆಯ ಇತರ ಹಲವು ಕಡೆ ಅನಧಿಕೃತ ವ್ಯಾಪಾರಿಗಳು ತರಕಾರಿ ಮತ್ತು ಹಣ್ಣು ವ್ಯಾಪಾರ ಮಾಡುತ್ತಿದ್ದಾರೆ ಇದರಿಂದಾಗಿ ಅಧಿಕೃತ ವ್ಯಾಪಾರಿಗಳಿಗೆ ತೀವ್ರ ನಷ್ಟ ಉಂಟಾಗುತ್ತಿದೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲಿಸಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು. ಪಂಚಾಯತಿಗೆ ತೆರಿಗೆ ಪಾವತಿ ಮಾಡುತ್ತಿದ್ದೇವೆ ಪ್ರತಿ ತಿಂಗಳು ಕಟ್ಟಡ ಬಾಡಿಗೆ ಕಟ್ಟಬೇಕಿದೆ. ವ್ಯಾಪಾರ ಮೇಲೆ ಅನಧಿಕೃತ ವ್ಯಾಪಾರದಿಂದ ಹೊಡೆತ ಬೀಳುತ್ತದೆ ಎಂದು ವ್ಯಾಪಾರಿಗಳು ತಿಳಿಸಿದರು.
ವಿಟ್ಲದ ಪುತ್ತೂರು, ಮಂಗಳೂರು, ಸಾಲೆತ್ತೂರು ಮತ್ತು ಕಾಸರಗೋಡು ರಸ್ತೆ ಬದಿಯಲ್ಲಿ ಅಕ್ರಮವಾಗಿ ಟೆಂಟ್ ಹಾಕಿ ತರಕಾರಿ, ಹಣ್ಣು ಹಂಪಲು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಬಡಪಾಯಿ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ ಎಂದು ಪ್ರತಿಭಟನಾಕಾರರು ದೂರಿದರು. ಮನವಿ ಸಲ್ಲಿಸಲು ಹೋದಾಗ ಮುಖ್ಯಾಧಿಕಾರಿಯವರು ಕಚೇರಿ ಕೊಟ್ಟು ಹೋಗಿ ಎಂದು ಹೇಳಿದಾಗ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ಸ್ಪಷ್ಟನೆ:
ಚುನಾವಣೆ ಕಾರಣ ಕೆಲಸದ ಒತ್ತಡದಿಂದ ಪರಿಶೀಲನೆ ವಿಳಂಬ ಆಗಿದೆ. ಅನುಮತಿ ಪಡೆಯದ ಬೀದಿಬದಿ ವ್ಯಾಪಾರಿಗಳು ಇದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಜಮಾಲ್, ಹರಿಪ್ರಸಾದ್, ಹೈದರ್, ಶರೀಫ, ರಾಕೇಶ್ ಮೊದಲಾದವರು ಇದ್ದರು.






