ಕುಮಟಾ-ಶಿರಸಿ: ಕಾರು-ಬೈಕ್ ನಡುವೆ ಅಪಘಾತ: ಬೈಕ್ ಚಾಲಕ ಮೃತ್ಯು
ಶಿರಸಿ:ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಕಾರು-ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟರೆ ಕಾರು ಚಾಲಕ ಹಾಗೂ ಕುಟುಂಬದವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹನುಮಂತಿ ಬಳಿ ಢಿಕ್ಕಿ ಸಂಭವಿಸಿದ್ದು ಬೈಕ್ ಸವಾರ ತಾಲೂಕಿನ ಮಂಜುಗುಣಿ ಬಳಿಯ ಕಲ್ಲಳ್ಳಿಯವರಾದ ಶ್ಯಾಮಸುಂದರ ವಿರೂಪಾಕ್ಷ ಹೆಗಡೆ (53) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಾರು ಚಾಲಕ ಸಿದ್ದಾಪುರದ ಬಾಳೆಕೊಪ್ಪದ ವಿನಾಯಕ ಸುಬ್ರಾಯ ಹೆಗಡೆ, ಅವರ ಪತ್ನಿ ವಿದ್ಯಾ ಹೆಗಡೆ, ಪತ್ನಿ ಲಾಸ್ಯಾ ಅವರಿಗೂ ಗಾಯಗಳಾಗಿವೆ.
ಶಿರಸಿ ಕಡೆಯಿಂದ ಕುಮಟಾ ಕಡೆಗೆ ಕಾರನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬಂದ ವಿನಾಯಕ ಹೆಗಡೆ ಹನುಮಂತಿ ತಿರುವಿನಲ್ಲಿ ಕಾರನ್ನು ನಿಯಂತ್ರಿಸಲಾಗದೇ ಎದುರಿನಿಂದ ಬರುತ್ತಿದ್ದ ಶ್ಯಾಮಸುಂದರ ಹೆಗಡೆ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದ ಎನ್ನಲಾಗಿದೆ.
ಅವರು ಡಿಕ್ಕಿ ಹೊಡೆದ ರಭಸಕ್ಕೆ ಶ್ಯಾಮಸುಂದರ ಹೆಗಡೆ ಸುಮಾರು 20 ಅಡಿ ದೂರದಲ್ಲಿ ಕಂದಕಕ್ಕೆ ಹಾರಿ ಬಿದ್ದು ಮೃತಟ್ಟಿದ್ದರು. ಅಲ್ಲದೇ ಕಾರೂ ಕೂಡ ಪಲ್ಟಿಯಾಗಿ ನಿರ್ಮಾಣ ಹಂತದಲ್ಲಿದ್ದ ಮನೆಯ ಪಕ್ಕ ಹೋಗಿ ಬಿದ್ದಿದೆ.





