February 2, 2026

ಪದ್ಮನಾಭ ನರಿಂಗಾನ ಇನ್ನು ನೆನಪು ಮಾತ್ರ!

0

-ಡಿ. ಐ. ಅಬೂಬಕರ್ ಕೈರಂಗಳ

image_editor_output_image-231294401-1707467705956.jpg

ನರಿಂಗಾನ ಪದ್ಮನಾಭ ಎಂಬ ಕಾಂಗ್ರೆಸ್ ನಾಯಕ ನಿನ್ನೆ ಮರಣ ಹೊಂದಿದ ವಾರ್ತೆಯನ್ನು ನೀವೆಲ್ಲ ಕೇಳಿದಿರಿ. ಅವರೊಬ್ಬ ಕಾಂಗ್ರೆಸ್ ನಾಯಕರಾಗಿದ್ದರು ಎಂಬುದು ಮಾತ್ರವಲ್ಲದೆ ಮಾನವತಾ ಪ್ರೇಮಿಯೂ ಪರೋಪಕಾರಿಯೂ ಪ್ರತಿಭಾ ಪ್ರೋತ್ಸಾಹಿಯೂ ಆಗಿದ್ದರು. ಈ ನಿಟ್ಟಿನಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾದವರು ಎಂಬ ನೆಲೆಯಲ್ಲಿ ಮಾತ್ರವಲ್ಲ ವೈಯಕ್ತಿಕವಾಗಿ ನಾನು ಅವರಿಗೆ ಆಭಾರಿ ಕೂಡಾ ಆಗಿದ್ದೇನೆ ಎಂಬ ಅಂಶ ಕೂಡಾ ಇದೆ. ಅವರ ಅಗಲಿಕೆಯು ಸಾರ್ವಜನಿಕರಿಗೆ ಧೀಮಂತ ನಾಯಕರೊಬ್ಬರ ಅಗಲಿಕೆ ಎಂಬುದಕ್ಕಿಂತಲೂ ಮಿಗಿಲಾಗಿ ನನಗೆ ವೈಯಕ್ತಿಕವಾಗಿ ನನ್ನ ಪ್ರೇರಕ ಶಕ್ತಿಯ ನಷ್ಟವಾಗಿದೆ ಅನ್ನಬಹುದು.

ಸ್ವಾತಂತ್ರ್ಯ ಹೋರಾಟಗಾರ ಮಹಾಬಲೇಶ್ವರ ಭಟ್ ರವರ ಗರಡಿಯಲ್ಲಿ ಪಳಗಿದ್ದ ಪದ್ಮನಾಭರವರು ಮೊದಲು ಕಮ್ಯೂನಿಸ್ಟ್‌ ಪಕ್ಷದಲ್ಲಿ ಒಲವು ಇದ್ದವರಾಗಿದ್ದರು. ನಾನು ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದಾಗ ನೆಲ್ಸನ್ ಮಂಡೇಲಾ ಅವರ ಜೀವನ ಚರಿತ್ರೆಯನ್ನು ಆಧರಿಸಿ ” ಕ್ರಾಂತಿ ಅತ್ತ್ ಶಾಂತಿ” ಎಂಬ ಒಂದು ಕಿರುನಾಟಕ ಬರೆದಿದ್ದೆ. ಇದನ್ನು ಓದಿದ ಶ್ರೀ ಪದ್ಮನಾಭರವರು ನನ್ನನ್ನು ಪ್ರಶಂಶಿಸಿ ನಿನ್ನಲ್ಲಿ ಒಳ್ಳೆಯ ಪ್ರತಿಭೆ ಇದೆ ಎಂದು ಉತ್ತೇಜನ ಕೊಟ್ಟಿದ್ದರು.

ನನ್ನನ್ನು ಸ್ಥಳೀಯ ಎಸ್. ಎಫ್ ಐ ಪ್ರಧಾನ ಕಾರ್ಯದರ್ಶಿ ಮಾಡಿ ಸಾಮಾಜಿಕ ರಂಗದಲ್ಲಿ ಸಕ್ರಿಯತೆಗೆ ಇಳಿಸಿದ್ದರು. ಸಾಹಿತ್ಯ ಕ್ಷೇತ್ರದಲ್ಲೂ ಹುರಿದುಂಬಿಸಿ ನನ್ನ ಒಂದು ಕವನ ಸಂಕಲನವನ್ನು ಬಿಡುಗಡೆ ಮಾಡಿಸಿದ್ದರು.
ಮುಂದೆ ನಾನು ಅಲ್ ಮುನೀರ್ ಎಂಬ ಪತ್ರಿಕೆ ಮತ್ತು ನಂತರ ಅಲ್ ಅನ್ಸಾರ್ ಪತ್ರಿಕೆಯಲ್ಲಿ ಸಾಲೆತ್ತೂರು ಫೈಝಿಯವರ ಜೊತೆಗೆ ಸೇರಿ ದುಡಿಯತೊಡಗಿದಾಗ ಬಾಲ್ಯ ಕಾಲದಲ್ಲಿದ್ದ ನನ್ನ ಜೀವನ ಶೈಲಿ ಮತ್ತು ಸಾಮಾಜಿಕ ಹಾದಿ ಬದಲಾಯಿತು. ಇಸ್ಲಾಮಿನ ಧಾರ್ಮಿಕ ಹಾದಿಯ ಸರಿಯಾದ ಚಿತ್ರಣ ಇಲ್ಲದಿದ್ದ ಬಾಲ್ಯಕಾಲದಲ್ಲಿ ನಾಟಕ, ಊರಲ್ಲಿ ಸಾರಾ ಅಬೂಬಕರ್ ಅವರ ಸ್ಟೇಜ್ ಪ್ರೋಗ್ರಾಮ್ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದ ನಾನು ಫೈಝಿಯವರ ಮಾರ್ಗದರ್ಶನದಲ್ಲಿ ಇಸ್ಲಾಮಿನ ನೈಜ ಹಾದಿಯಾದ ಸುನ್ನತ್ ಜಮಾಅತ್ ನ ಕಾರ್ಯಕರ್ತನಾಗಿ ಬದಲಾದೆ.

ಧಾರ್ಮಿಕ ಸಾಹಿತ್ಯ ರಂಗದಲ್ಲಿ ಸಕ್ರಿಯನಾದೆ. ಆದರೆ ಶ್ರೀ ಪದ್ಮನಾಭರವರು ಎಲ್ಲೇ ಕಾಣಸಿಕ್ಕಿದ್ದರೂ ಆತ್ಮೀಯತೆಯಿಂದ ಮಾತಾಡಿಸುತ್ತಿದ್ದುದು, ಅವರ ಜೊತೆಗಿದ್ದವರಲ್ಲಿ ” ಇವರೊಬ್ಬ ಪ್ರತಿಭಾವಂತ” ಎಂದು ನನ್ನನ್ನು ಪರಿಚಯಪಡಿಸುವುದು ಇದ್ದೇ ಇತ್ತು.

ಮುಂದೆ ಅವರು ಕಾಂಗ್ರೆಸ್ ಸೇರಿದರು. ಪಂಚಾಯತ್ ಉಪಾಧ್ಯಕ್ಷರಾದರು, ಕಾಂಗ್ರೆಸ್ ನ ಮುಂದಾಳುವಾದರು. ಅಹಿಂದದ ನಾಯಕರಾದರು.ಅವರ ಪುತ್ರ ಇದೀಗ ಜಿಲ್ಲಾಧಿಕಾರಿಯವರ ಕಾರಿನ ಚಾಲಕರಾಗಿದ್ದು ಶಾಲೆಯಲ್ಲಿ ನನ್ನ ಸಹಪಾಠಿ ಕೂಡಾ ಆಗಿದ್ದರು. ಪದ್ಮನಾಭರವರು ನನ್ನ ಮಗಳ ಮದುವೆಗೂ ಆಗಮಿಸಿ ಶುಭ ಹಾರೈಸಿದ್ದರು.
ಇತ್ತೀಚೆಗೆ ಒಂದು ವಾರಕ್ಕೆ ಮೊದಲು ಒಂದು ಮದುವೆ ಸಮಾರಂಭದಲ್ಲಿ ಕಾಣ ಸಿಕ್ಕಿದಾಗ ನಾನು ಅಹಿಂದ ರಾಜ್ಯಮಟ್ಟದ ಉಪಾಧ್ಯಕ್ಷನಾದುದಕ್ಕೆ ಅಭಿನಂದಿಸಿದ್ದರು. ಅಹಿಂದವನ್ನು ನೀವು ಬೆಳೆಸಬೇಕು ಎಂದು ಹೇಳಿದ್ದರು.

ಇತ್ತೀಚೆಗೆ ಹೊಳ್ಳ ಮಾಸ್ಟರ್ ನಿಧನರಾದಾಗ ಅವರ ಅಂತಿಮ ದರ್ಶನಕ್ಕೆ ಹೋಗುವ ದಾರಿಯಲ್ಲಿ ಪದ್ಮನಾಭರವರನ್ನು ಬನ್ನಿ ನಾವು ಜೊತೆಯಾಗಿ ಹೋಗೋಣ ಅಂದೆ. ಆಗ ಅವರು; ಹೊಳ್ಳ ಮಾಸ್ಟರ್ ಬ್ರಾಹ್ಮಣರು. ದಲಿತನಾದ ನಾನು ಅಲ್ಲಿಗೆ ಬಂದರೆ ಒಳಬಿಡುತ್ತಾರಾ ಎಂದು ಕೇಳಿದರು. ಅದೆಲ್ಲ ಹಿಂದಿನ ಕಾಲದ ರೂಡಿ, ಈಗ ಅದೆಲ್ಲ ಇಲ್ಲ ನೀವು ಬನ್ನಿ ಎಂದಾಗ ನನ್ನ ಜೊತೆ ಬಂದು ಅಂತಿಮ ದರ್ಶನ ಪಡೆದರು.

ಅಲ್ಲಿಂದ ವಾಪಸಾಗುವಾಗ; ನೀವು ಧೈರ್ಯ ತುಂಬಿದ್ದರಿಂದ ನನಗವರ ಅಂತಿನ ದರ್ಶನ ಸಾಧ್ಯವಾಯಿತು ಎಂದರು. ಇಷ್ಟು ವರ್ಷಗಳಲ್ಲಿ ನಾವು ಎಷ್ಟೋ ಬಾರಿ ಜೊತೆಯಾಗಿ ಅನೇಕ ಊಟೋಪಹಾರ ಮಾಡಿದ್ದೇವೆ, ಒಟ್ಟಿಗೆ ನಡೆದಾಡಿದ್ದೇವೆ, ಕೈ ಕೈ ಹಿಡಿದಿದ್ದೇವೆ. ನನ್ನ ಮನೆಯೊಳಗೇ ಕುರ್ಚಿಯಲ್ಲಿ ಕೂತು ಚಹಾ ಕುಡಿದಿದ್ದಾರೆ. ಆದರೆ ಅವರು ದಲಿತ ವರ್ಗದವರು ಎಂಬ ಒಂದು ಯೋಚನೆಯೇ ನನ್ನ ಮನದಲ್ಲಿ ಹುಟ್ಟಿರಲಿಲ್ಲ‌. ಅದು ಎಲ್ಲಾ ಮನುಷ್ಯರನ್ನು ಸಮಾನವಾಗಿ ಕಾಣಬೇಕೆಂಬ ನನ್ನ ಇಸ್ಲಾಮಿನ ಸಂಸ್ಕೃತಿ.

ವಯಸ್ಸು ಎಪ್ಪತ್ತೇಳಾಗಿದ್ದರೂ ಗಟ್ಟಿ ಮುಟ್ಟಾಗಿದ್ದರು. ಕಾಂಗ್ರೆಸ್ ಮತ್ತು ಅಹಿಂದ ಕಾರ್ಯಕ್ರಮಗಳಿಗೆ ನಡೆದುಕೊಂಡೇ ಹೋದುದು ಕೂಡಾ ಇದೆ. ಸತ್ಯ ನಿಷ್ಠರಾಗಿದ್ದ ಅವರು ಅನ್ಯಾಯದ ವಿರುದ್ಧ ತಕ್ಷಣ ಖಾರವಾಗಿ ಪ್ರತಿಕ್ರಿಯೆ ನೀಡುತ್ತಿದ್ದರು. ಆ ವಿಷಯದಲ್ಲಿ ಮುಖ ನೋಡುತ್ತಿರಲಿಲ್ಲ.

ಯಾವುದೇ ಮುಲಾಜು ಇಡುತ್ತಿರಲಿಲ್ಲ. ದೊಡ್ಡ ಧೈರ್ಯ ಶಾಲಿಯಾಗಿದ್ದರು. ಅಚಲ ಆದರ್ಶ ನಿಷ್ಠರಾಗಿದ್ದರು. ಕೈರಂಗಳ ನಾಡಿಗೆ ಇಂತಹ ಓರ್ವ ಧೀಮಂತ ನಾಯಕ ನಷ್ಟವಾದ ದುಃಖ ಇದೆ. ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಜನಸಾಗರವೇ ಇದಕ್ಕೆ ಸಾಕ್ಷಿ.

Leave a Reply

Your email address will not be published. Required fields are marked *

error: Content is protected !!