ಎಂಟು ತಿಂಗಳ ಮಗುವಿನ ಹೊಟ್ಟೆಯಲ್ಲಿ ಎಲ್ಇಡಿ ಬಲ್ಬ್ ಪತ್ತೆ
ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಎಂಟು ತಿಂಗಳ ಮಗು ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಎಲ್‌ಇಡಿ ಬಲ್ಬ್ ನುಂಗಿದ ಘಟನೆ ನಡೆದಿದೆ. ಪೋಷಕರ ಸಮಯೋಚಿತ ನಿರ್ಧಾರ ಮತ್ತು ವೈದ್ಯರ ತ್ವರಿತ ಚಿಕಿತ್ಸೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಮಾಹಿತಿಯ ಪ್ರಕಾರ, ಮನೆಯಲ್ಲೇ ಆಟವಾಡುತ್ತಿದ್ದ ವೇಳೆ ಮಗು ಸಣ್ಣ ಗಾತ್ರದ ಎಲ್‌ಇಡಿ ಬಲ್ಬ್ ಅನ್ನು ಬಾಯಿಗೆ ಹಾಕಿಕೊಂಡು ನುಂಗಿದೆ. ಬಳಿಕ ಮಗು ನಿರಂತರವಾಗಿ ಅಳಲಾರಂಭಿಸಿದ್ದು, ಇದರಿಂದ ಆತಂಕಗೊಂಡ ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಮಗುವಿನ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಎಕ್ಸ್-ರೇ ಪರೀಕ್ಷೆ ನಡೆಸಿದರು. ಈ ವೇಳೆ ಮಗುವಿನ ಗಂಟಲಿನಲ್ಲಿ ಲೋಹದ ವಸ್ತು ಸಿಲುಕಿರುವುದು ಪತ್ತೆಯಾಯಿತು. ಬಳಿಕ ಲ್ಯಾರಿಂಗೋಸ್ಕೋಪ್ ಪರೀಕ್ಷೆ ನಡೆಸಿದಾಗ ಅದು ಎಲ್‌ಇಡಿ ಬಲ್ಬ್ ಎಂಬುದು ದೃಢಪಟ್ಟಿತು.
ಇಎನ್‌ಟಿ ತಜ್ಞೆ ಡಾ. ರಾಜಶ್ರೀ ಅವರ ನೇತೃತ್ವದ ವೈದ್ಯರ ತಂಡ ಯಾವುದೇ ಶಸ್ತ್ರಚಿಕಿತ್ಸೆ ನಡೆಸದೆ ವಿಶೇಷ ಉಪಕರಣಗಳ ನೆರವಿನಿಂದ ಬಲ್ಬ್ ಅನ್ನು ಸುರಕ್ಷಿತವಾಗಿ ಹೊರತೆಗೆದು ಮಗುವಿನ ಜೀವ ಉಳಿಸಿದೆ. ಚಿಕಿತ್ಸೆ ಬಳಿಕ ಮಗು ಆರೋಗ್ಯವಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಚೇತರಿಸಿಕೊಳ್ಳುತ್ತಿದೆ.
ಇಂತಹ ಘಟನೆಗಳು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವುದರಿಂದ, ಸಣ್ಣ ವಸ್ತುಗಳು, ಬ್ಯಾಟರಿಗಳು, ಬಲ್ಬ್‌ಗಳು, ನಾಣ್ಯಗಳು ಹಾಗೂ ಇತರ ಅಪಾಯಕಾರಿ ವಸ್ತುಗಳನ್ನು ಮಕ್ಕಳ ಕೈಗೆ ಸಿಗದಂತೆ ಸುರಕ್ಷಿತವಾಗಿ ಇಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಮಕ್ಕಳು ಏನನ್ನಾದರೂ ನುಂಗಿರುವ ಅನುಮಾನ ಬಂದರೆ ಮನೆಯಲ್ಲೇ ಚಿಕಿತ್ಸೆ ನೀಡಲು ಪ್ರಯತ್ನಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ.




