ಮಂಗಳೂರು: ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ವ್ಯಕ್ತಿ ಸಾವು
ಮಂಗಳೂರು: ಮಂಗಳೂರಿನ ಬೈಕಂಪಾಡಿಯಲ್ಲಿ ಖಾಲಿ ತೈಲ ಟ್ಯಾಂಕರ್‌ನ ಮೇಲೆ ನಿಂತು ಕಾರ್ಮಿಕರೊಬ್ಬರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಗಂಭೀರ ಗಾಯಗೊಂಡಿದ್ದು, ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರೊನಾಲ್ಡ್ ಪೌಲ್(60) ಮೃತ ವ್ಯಕ್ತಿ. ಬೈಕಂಪಾಡಿ ಜೋನ್ಸ್ ಪೆಟ್ರೋ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ರೊನಾಲ್ಡ್ ಪೌಲ್ ಎಂಬವರು ಇತರ 6 ಮಂದಿ ಕಾರ್ಮಿಕರೊಂದಿಗೆ ಖಾಲಿ ಟ್ಯಾಂಕರ್ ಮೇಲೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಶನಿವಾರ ಸಂಜೆ 4 ಗಂಟೆ ಹೊತ್ತಿಗೆ ರೊನಾಲ್ಡ್ ಪೌಲ್ ಟ್ಯಾಂಕರ್ ಮೇಲೆ ನಿಂತು ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಇತರ ಕಾರ್ಮಿಕರು ಕೆಳಗೆ ಕೆಲಸ ಮಾಡುತ್ತಿದ್ದರು. ಆಗ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಟ್ಯಾಂಕರ್‌ಗೆ ಬೆಂಕಿ ಆವರಿಸಿದ ಪರಿಣಾಮವಾಗಿ ರೊನಾಲ್ಡ್ ಪೌಲ್ ಗಾಯಗೊಂಡು ಟ್ಯಾಂಕರ್ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಸುಮಾರು 20 ಅಡಿ ಕೆಳಗೆ ಬಿದ್ದ ಪರಿಣಾಮವಾಗಿ ಅವರ ಹೊಟ್ಟೆ ಮತ್ತು ತಲೆಗೆ ತೀವ್ರ ಪೆಟ್ಟಾಗಿದೆ.
ಇವರೊಂದಿಗಿದ್ದ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಆದರೆ ಶನಿವಾರ ರಾತ್ರಿ 8:30ರ ಹೊತ್ತಿಗೆ ರೊನಾಲ್ಡ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





