ಮಂಗಳೂರು: ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಅಮೃತ ಸೋಮೇಶ್ವರ ನಿಧನ
ಉಳ್ಳಾಲ: ಕನ್ನಡ, ತುಳು ಭಾಷೆಯ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಸಂಶೋಧಕ, ಯಕ್ಷಗಾನ ಪ್ರಸಂಗಕರ್ತ ಅಮೃತ ಸೋಮೇಶ್ವರ (89) ಇಂದು ಬೆಳಗ್ಗೆ 9.15ಕ್ಕೆ ನಿಧನರಾಗಿದ್ದಾರೆ.
ಸೋಮೇಶ್ವರ ನಿವಾಸಿಯಾಗಿದ್ದ ಅಮೃತ ಸೋಮೇಶ್ವರ ಅವರು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಕನ್ನಡ ಪ್ರಾಧ್ಯಾಪಕರಾಗಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ವೈವಿಧ್ಯಮಯ ಹಾಗೂ ವಿಸ್ತೃತವಾದ ಸಾಹಿತ್ಯ ಕೃಷಿಯನ್ನು ನಡೆಸಿದ್ದಾರೆ. ಯಕ್ಷಗಾನದ ಬಗ್ಗೆ ವ್ಯಾಪಕ ಸಂಶೋಧನೆ, ಅಧ್ಯಯನ, ಆವಿಷ್ಕಾರ, ಕೃತಿರಚನೆ ಅವರ ಇನ್ನೊಂದು ಪ್ರಮುಖ ಕಾರ್ಯಕ್ಷೇತ್ರವಾಗಿತ್ತು.
ಅಮೃತ ಸೋಮೇಶ್ವರ ಅವರು 1935ರ ಸೆಪ್ಟಂಬರ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ ಜನಿಸಿದರು.





