February 3, 2026

ಒಡಿಶಾ, ಆಂಧ್ರಪ್ರದೇಶ ಕರಾವಳಿ ತೀರದಲ್ಲಿ ‘ಜವಾದ್’ ಚಂಡಮಾರುತ ಸಾಧ್ಯತೆ!

0
PTI05_28_2021_000040A_1200x768.jpeg

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಚಂಡಮಾರುತ ‘ಜವಾದ್’ ತೀವ್ರಗೊಳ್ಳುತ್ತಿದ್ದು, ಶನಿವಾರ ಬೆಳಿಗ್ಗೆ ವೇಳೆಗೆ ಬಂಗಾಳಕೊಲ್ಲಿಯ ಪಶ್ಚಿಮದ ಕೇಂದ್ರ ಭಾಗ ಅಂದರೆ ಆಂಧ್ರಪ್ರದೇಶ, ಒಡಿಶಾದ ಕರಾವಳಿ ತೀರವನ್ನು ತಲುಪಲಿದೆ.

ಭಾರತೀಯ ಹವಾಮಾನ ಇಲಾಖೆ ಈ ವಿವರ ನೀಡಿದ್ದು, ಚಂಡಮಾರುತವು ತದನಂತರ ಒಡಿಶಾ, ಆಂಧ್ರಪ್ರದೇಶದ ಕರಾವಳಿಗೆ ಹೊಂದಿಕೊಂಡಂತೆ ಈಶಾನ್ಯ ದಿಕ್ಕಿನೆಡೆಗೆ ಸಾಗಲಿದೆ. ಡಿ.5ರ ವೇಳೆಗೆ ಪುರಿ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿಸಿದೆ. ‘ಜವಾದ್‌’ ಚಂಡಮಾರುತದ ಪರಿಣಾಮ ಆಂಧ್ರಪ್ರದೇಶದ ಉತ್ತರ ಕರಾವಳಿ ಮತ್ತು ಒಡಿಶಾದ ದಕ್ಷಿಣ ಕರಾವಳಿ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಲಿದೆ. ಶನಿವಾರ ಮಳೆಯ ತೀವ್ರತೆಯೂ ಹೆಚ್ಚಿರಲಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಮುಂಜಾಗ್ರತೆಯಾಗಿ ಆಂಧ್ರಪ್ರದೇಶದ ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ ಜಿಲ್ಲೆಗಳು ಮತ್ತು ಒಡಿಶಾದ ಗಜಪತಿ, ಗಂಜಾಂ, ಪುರಿ, ಜಗತ್ತ್ಸಿಂಗ್‌ಪುರ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ರೆಡ್‌ ಅಲರ್ಟ್‌ ನೀಡಲಾಗಿದೆ ಎಂದು ತಿಳಿಸಿದೆ.

ಒಡಿಶಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ‘ಜವಾದ್’ ಚಂಡಮಾರುತದ ಸಂಭವನೀಯ ಪರಿಣಾಮಗಳನ್ನು ಎದುರಿಸಲು ಎನ್‌ಡಿಆರ್‌ಎಫ್‌ ಒಟ್ಟು 64 ತಂಡಗಳನ್ನು ಸಜ್ಜುಗೊಳಿಸಿದೆ. ಎನ್‌ಡಿಆರ್‌ಎಫ್‌ ಮಹಾ ನಿರ್ದೇಶಕ (ಡಿ.ಜಿ) ಅತುಲ್‌ ಕರ‍್ವಾಲ್ ಅವರು, ಪರಿಣಾಮ ಉಂಟಾಗಬಹುದಾದ ರಾಜ್ಯಗಳಲ್ಲಿ ಪರಿಹಾರ ಕಾರ್ಯಗಳಿಗೆ 46 ತಂಡಗಳನ್ನು ನಿಯೋಜಿಸಿದ್ದು, 18 ತಂಡಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!