ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೊಣಿಜೇಟಿ ರೋಸಯ್ಯ ನಿಧನ
ಹೈದರಾಬಾದ್: ತಮಿಳು ನಾಡಿನ ಮಾಜಿ ರಾಜ್ಯಪಾಲ ಮತ್ತು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೊಣಿಜೇಟಿ ರೋಸಯ್ಯ ಶನಿವಾರ ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಅನಾರೋಗ್ಯಕ್ಕೆ ತುತ್ತಾದ ರೋಸಯ್ಯ ಅವರನ್ನು ಇಂದು ನಸುಕಿನ ಜಾವ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಹೈದರಾಬಾದ್ ನಲ್ಲಿ ನೆರವೇರಲಿದೆ.
ರೋಸಯ್ಯ ಅವರ ನಿಧನಕ್ಕೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ರೋಸಯ್ಯ, ಅವರು ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಅವರು ಆಂಧ್ರ ಪ್ರದೇಶದಲ್ಲಿ ಕೆ. ವಿಜಯ ಭಾಸ್ಕರ್ ರೆಡ್ಡಿ, ವೈ ಎಸ್ ರಾಜಶೇಖರ ರೆಡ್ಡಿ ಸೇರಿದಂತೆ ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದರು. ಹಣಕಾಸು ಸಚಿವರಾಗಿ ಅವರು ಸದನದಲ್ಲಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದರು.
1968ರಲ್ಲಿ ಎಂಎಲ್‌ಸಿಯಾಗಿ ರೋಸಯ್ಯ ರಾಜಕೀಯ ಪಯಣ ಆರಂಭಿಸಿದ್ದರು. ಅವರು ಆಗಸ್ಟ್ 31, 2011 ರಿಂದ ಆಗಸ್ಟ್ 30, 2016 ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿ ಮತ್ತು ವೈಎಸ್ ರಾಜಶೇಖರ್ ರೆಡ್ಡಿ ಅವರ ನಿಧನದ ನಂತರ ಸೆಪ್ಟೆಂಬರ್ 3 ರಿಂದ ನವೆಂಬರ್ 25 ರವರೆಗೆ ಆಂದ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನಿಧನಕ್ಕೆ ಸಂತಾಪ ಸೂಚಿಸಿದ್ದು,”ಕೊಣಿಜೇಟಿ ರೋಸಯ್ಯ ಅವರ ನಿಧನದ ಸುದ್ದಿ ಕೇಳಿ ನನಗೆ ನೋವಾಗಿದೆ ಎಂದು ಹೇಳಿದ್ದಾರೆ. ರೋಸಯ್ಯ ಅವರು ಅಪಾರ ಅನುಭವ, ಜ್ಞಾನ ಮತ್ತು ಅನುಭವಿ ರಾಜಕಾರಣಿ ಎಂದು ಸ್ಟಾಲಿನ್ ಹೇಳಿದರು. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪವನ್ನು ಅರ್ಪಿಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.





