ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿಸುವುದಿಲ್ಲ:
ಹೈಕೋರ್ಟ್‌ಗೆ ತಿಳಿಸಿದ ಸರಕಾರ
ಮಂಗಳೂರು: ಧಾರ್ಮಿಕವಾಗಿ ದ್ವೇಷ ಬಿತ್ತುವ ಮತ್ತು ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವುದಿಲ್ಲ, ತನಿಖೆ ನಡೆಸಿದ ಬಳಿಕ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳುವುದಾಗಿ ಖುದ್ದು ಸರ್ಕಾರವೇ ಹೈಕೋರ್ಟ್‌ಗೆ ತಿಳಿಸಿದ ಹಿನ್ನೆಲೆಯಲ್ಲಿ, ಆರ್‌ಎಸ್‌ಎಸ್ ಮುಖಂಡ ಬಂಧನ ಭೀತಿಯಿಂದ ಪಾರಾಗಿದ್ದಾರೆ.
ಧಾರ್ಮಿಕವಾಗಿ ದ್ವೇಷ ಬಿತ್ತುವ ಮತ್ತು ಮುಸ್ಲಿಮ್ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನಗರ ಠಾಣೆಯಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಝೀರ್ ಚಿಕ್ಕನೇರಳೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ರದ್ದು ಕೋರಿ ಕಲ್ಲಡ್ಕ ಪ್ರಭಾಕರ್ ಭಟ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ರಾಜೇಶ್ ರೈ ಕೆ ಅವರ ನೇತೃತ್ವದ ರಜಾಕಾಲೀನ ಪೀಠದ ಮುಂದೆ ಅರ್ಜಿಯು ವಿಚಾರಣೆಗೆ ಇಂದು ಪಟ್ಟಿಯಾಗಿತ್ತು
ಇಂದು ಸಂಜೆ ಅರ್ಜಿಯ ವಿಚಾರಣೆ ನಡೆಸಿದಾಗ ಸರ್ಕಾರದ ಪರ ವಕೀಲರು, ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಯ ಬಗ್ಗೆ ತನಿಖೆ ನಡೆಸಲಾಗುವುದು. ಸದ್ಯಕ್ಕೆ ಅವರನ್ನು ನಾವು ಬಂಧಿಸುವುದಿಲ್ಲ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ಹೈಕೋರ್ಟ್, ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಬಂಧನದಿಂದ ಮಧ್ಯಂತರ ಪರಿಹಾರ ನೀಡಿತ್ತಲ್ಲದೇ, ಪ್ರಕರಣವನ್ನು ಜ.9ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಮುಖಂಡ ಬಂಧನ ಭೀತಿಯಿಂದ ಪಾರಾಗಿದ್ದಾರೆ. ಅಲ್ಲದೇ ಈ ಬಗ್ಗೆ, ಹಿರಿಯ ವಕೀಲ ಮತ್ತು ಕರ್ನಾಟಕದ ಮಾಜಿ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್ ಕೂಡ ತಮ್ಮ ಫೇಸ್‌ಬುಕ್ ಮೂಲಕ ಖಚಿತಪಡಿಸಿದ್ದಾರೆ.