ಅಂಗನವಾಡಿ ಕೇಂದ್ರದ ಸಿಬ್ಬಂದಿ ಎಡವಟ್ಟು: ಲಸಿಕೆ ಓವರ್ ಡೋಸ್‌ನಿಂದ ಮಗು ಸಾವು
ಹುಬ್ಬಳ್ಳಿ: ಅಂಗನವಾಡಿ ಕೇಂದ್ರದ ಸಿಬ್ಬಂದಿ ಎಡವಟ್ಟಿನಿಂದ ಲಸಿಕೆ ಓವರ್ ಡೋಸ್‌ನಿಂದ ಮಗು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ನಗರದ ಉಣಕಲ್ನಲ್ಲಿ ಕೇಳಿ ಬಂದಿದೆ.
ಮೃತಪಟ್ಟ ಮಗು ಹುಬ್ಬಳ್ಳಿಯ ಉಣಕಲ್ ನ ನಿವಾಸಿ ಜಟ್ಟೆಪ್ಪರ ಮೊಮ್ಮಗ ಧ್ರುವ (2 ) ಎಂದು ಗುರುತಿಸಲಾಗಿದೆ.
ಒಂದೇ ದಿನ ಮಗುವಿಗೆ 5 ಲಸಿಕೆ ಹಾಕಿದ್ದ ಪರಿಣಾಮ ಓವರ್ ಡೋಸ್‌ನಿಂದ ಮಗು ಮೃತಪಟ್ಟಿದೆ ಎಂದು ಅಂಗನವಾಡಿ ಕೇಂದ್ರದ ಸಿಬ್ಬಂದಿಗಳ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ.
ತಾತ ಹಾಗೂ ಅಜ್ಜಿಯ ಮನೆಯಲ್ಲಿ ಧ್ರುವ ವಾಸವಿದ್ದ. ಹುಬ್ಬಳ್ಳಿಯ ಸಾಯಿನಗರದ ಅಂಗನವಾಡಿ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆ ಲಸಿಕೆ ಹಾಕಿದ್ದರು.
ಲಸಿಕೆ ಹಾಕಿದ ಬಳಿಕ ತೀವ್ರ ಜ್ವರ, ಹೊಟ್ಟೆ ನೋವಿನಿಂದ ಮಗು ಬಳಲಿದ್ದು, ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮಗುವಿನ ಅಜ್ಜಿ ದಾಖಲಿಸಿದ್ದರು. ಕಿಮ್ಸ್ಗೆ ದಾಖಲಾಗುತ್ತಿದ್ದಂತೆಯೇ ಮಗು ಸಾವನ್ನಪ್ಪಿದೆ.





