April 3, 2025

ಡಿ.15ರಂದು ತಾಯಿಫ್ ಪ್ರೀಮಿಯರ್ ಲೀಗ್: TPL – 06 ಸಂಭ್ರಮದ ಕ್ರೀಡಾಕೂಟ

0

ಬರಹ: ಅಬ್ದುರ್ರಝಾಕ್ ಕೊಡಂಗಾಯಿ

ಇದೇ ಡಿಸೆಂಬರ್ 15, 2023 ರಂದು ತಾಯಿಫ್’ನ ಫೈಸಲಿಯಾದಲ್ಲಿ ಕ್ರೀಡಾಂಗಣದಲ್ಲಿ ಜರಗಲಿದೆ. ಕೇರಳ , ಕರ್ನಾಟಕ ಹಾಗೂ ಇನ್ನಿತರ ದಕ್ಷಿಣ ಭಾರತೀಯ ಅನಿವಾಸಿಗಳ ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಲೀಗ್ ಪಂದ್ಯಾಟದ ರಸದೌತಣ.

2016 ರಲ್ಲಿ ಆರಂಭಗೊಂಡು ಪ್ರತಿವರ್ಷ ಪ್ರೇಕ್ಷಕರನ್ನು ಕುತೂಹಲ, ಸಂಭ್ರಮ, ಸಡಗರದಲ್ಲಿ ತೇಲಿಸುತ್ತಾ ಹಬ್ಬದ ವಾತಾವರಣ ನೀಡುತ್ತಾ ಬಂದ ಈ ಕ್ರೀಡಾಕೂಟ ಇದೀಗ ಆರನೇ ವರ್ಷದಲ್ಲಿ ಪೂರ್ವಾಧಿಕ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ತಾಯ್ನಾಡಿನಲ್ಲಿ ಕುಟುಂಬ, ಬಂಧು ಬಳಗ, ಆಪ್ತೇಷ್ಟರನ್ನು ಅಗಲಿ ದೂರದ ಗಲ್ಫ್ ದೇಶದಲ್ಲಿ ಕುಟುಂಬದ, ನಾಡಿನ ಏಳಿಗಾಗಿ ದುಡಿಯುತ್ತಿರುವ ಅನಿವಾಸಿ ಭಾರತೀಯರ ವಿರಹದ ದುಖಕ್ಕೆ ಇಂತಹ ಕೂಟ ಕೂಡುವಿಕೆಗಳು ಅಮೃತ ಸಿಂಚನಗಳನ್ನೆರೆಯುತ್ತವೆ. ಅನಿವಾಸಿಗಳಲ್ಲಿರುವ ಉತ್ತಮ ಕ್ರೀಡಾಪಟುಗಳ ಪ್ರತಿಭೆಗಳು, ಕಮರದೆ, ಕ್ರೀಡಾಪ್ರೇಮಿಗಳ ಉತ್ಸಾಹ ಮಂಕಾಗದೆ ಜೀವಂತವಾಗಿರಿಸುವ ಈ ಕ್ರೀಡಾಕೂಟವು ಅನಿವಾಸಿ ಭಾರತೀಯರ ಪಾಲಿಗೆ ನವಚೈತನ್ಯದ ಸಿಂಚನವಾಗಿದೆ.
2016 ರ ಪ್ರಥಮ ವರ್ಷ ನಡೆದ ಅಮೋಘ ಕ್ರೀಡಾ ಪ್ರದರ್ಶನದಲ್ಲಿ *ನೈಟ್ ರೈಡರ್ಸ್* ತಂಡ ಚಾಂಪಿಯನ್ ಆಗಿ ಮೂಡಿಬಂದಿತ್ತು.
ಮುಂದಿನ ವರ್ಷ *ರೈಸಿಂಗ್ ಸ್ಟಾರ್* ತಂಡವು ಅಮೋಘ ಕ್ರೀಡಾ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಪಡೆದುಕೊಂಡಿತ್ತು.
ಮೂರನೆಯ ವರ್ಷ; *ಪವರ್ ಜೆಂಟ್ಸ್* ತಂಡವು ಕೆಚ್ಚೆದೆಯ ಹೋರಾಟದಿಂದ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿತ್ತು. ನಾಲ್ಕನೆಯ ವರ್ಷ ಪಂದ್ಯಾಟ ಆರಂಭ ಗೊಂಡಿತ್ತಾದರೂ ಕೊರೋನಾ ಕಾರಣದಿಂದ ಪ್ರಥಮ ಸುತ್ತಿನಲ್ಲೇ ಪಂದ್ಯ ರದ್ದಾಗಿತ್ತು.
ಐದನೇಯ ವರ್ಷದ ಮಹತ್ವದ ಪಂದ್ಯಾಟದಲ್ಲಿ *ಬ್ರದರ್ಸ್ ತಾಯಿಫ್* ತಂಡವು ಚಾಂಪಿಯನ್ಸ್ ಪಟ್ಟ ಅಲಂಕರಿಸಿತು.

 

 

ಇದೀಗ ಸೀಸನ್ -6 ಬಹಳ ರೋಮಾಂಚಕವಾಗಿ ಅತ್ಯುತ್ಸಾಹದಿಂದ ಭಾಗವಹಿಸುವ ತಂಡಗಳ ವಿವರಣೆ ಹೀಗಿದೆ;

Game Swingers TAIF
ನಾಯಕ: ಅವಿನಾಶ್ ಕೊಣಾಜೆ
Young Fighters TAIF
ನಾಯಕ: ನೌಫಲ್ ಬೆಂಗ್ರೆ
Royal Strikers TAIF
ನಾಯಕ: ಹಫೀಝ್ ಅಡ್ಡೂರು
Gladiators TAIF
ನಾಯಕ: ಸಲೀಂ ಸೂರಿಂಜೆ

ಹೀಗೆ ಮಿಂಚಿನ ದಾಳಿಯಿಂದ ವಿಕೆಟ್ ಹಾರಿಸುವ ಮಾಂತ್ರಿಕ ದಾಳಿಗಾರರೂ ಚೆಂಡನ್ನು ರಾಕೆಟ್ ನಂತೆ ಉಡಾಯಿಸಿ ಸಿಕ್ಸರ್, ಬೌಂಡರಿಗೆ ಅಟ್ಟುವ ದಾಂಡಿಗರಿಂದಲೂ ಚುರುಚುರುಕಿನ ಕ್ಷೇತ್ರ ರಕ್ಷಕರಿಂದಲೂ ಕೂಡಿದ ಪ್ರಸ್ತುತ ತಂಡಗಳಿಂದ ನಡೆಯಲಿರುವ ಈ ಬಾರಿಯ ಮೈ ನವಿರೇಳಿಸುವ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಚಾಂಪಿಯನ್ ಕಿರೀಟವು ಯಾರ ಮುಡಿಗೇರಲಿದೆ ಎಂಬ ಕುತೂಹಲ ಗರಿಗೆದರಿದೆ.
ಒಂದಕ್ಕೊಂದು ಮೀರಿಸುವ ಅದ್ಭುತ ಛಲ, ಛಾತಿಯಿಂದ ಕೂಡಿದ ಘಟಾನುಘಟಿ ತಂಡಗಳ ನಡುವೆ ನಡೆಯಲಿರುವ ಕ್ರೀಡಾಕದನದ ಅಮೋಘ ರಸಗಳಿಗೆಗಳನ್ನು ಮನದಣಿಯೆ ವೀಕ್ಷಿಸುವ ಕುತೂಹಲ ಎಲ್ಲೆಡೆ ಚಿಮ್ಮುತ್ತಲಿದೆ. ವಿಜಯ ಶ್ರೀಮಾಲೆ ಯಾವ ತಂಡದ ಕೊರಳಿಗೆ ಬೀಳಲಿದೆ, ಏನೆಲ್ಲ ಅನಿರೀಕ್ಷಿತ ತಿರುವುಗಳು ಮೂಡಿ ಬರಲಿದೆ ಎಂಬ ಕಾತರ ನೆಲೆಸಿದೆ.

ಆವೇಶ ಭರಿತ ಆಟ, ತಂಡಗಳ ಛಲದ ಛಾತಿ, ಆಟಗಾರರ ಪ್ರತಿಭೆಗಳ ಪ್ರದರ್ಶನ, ಪ್ರೇಕ್ಷಕರ ಸಂಭ್ರಮ, ಆಕರ್ಷಕ ವೀಕ್ಷಕ ವಿವರಣೆ, ಬಹುಮಾನ ವಿತರಣೆ, ಸ್ಟಾಂಡರ್ಡ್ ತಪ್ಪದ ಹಾಸ್ಯ, ವಿನೋದಗಳ ರಸ ನಿಮಿಷಗಳು ಎಲ್ಲವೂ ಸೇರಿ ಅನಿವಾಸಿ ಭಾರತೀಯರನ್ನು ಹಬ್ಬದ ಸಂಭ್ತಮದಲ್ಲಿ, ನವೋಲ್ಲಾಸದ ಸಡಗರದಲ್ಲಿ ತೇಲಿಸುವುದಲ್ಲದೆ ತಾಯ್ನಾಡಿನ ಸ್ನೇಹಿತರ ಪ್ರೀತಿ ಹಂಚಿಕೊಳ್ಳುವ ಅಸುಲಭ ಮುಹೂರ್ತವೂ ಕೂಡಾ ಆಗಿರುವ ಈ ಸಂಭ್ರಮೋಲ್ಲಾಸಕ್ಕೆ ಸರ್ವರಿಗೂ ಆದರದ, ಅಕ್ಕರೆಯ, ಸಗೌರವ ಆಮಂತ್ರಣ.

Leave a Reply

Your email address will not be published. Required fields are marked *

error: Content is protected !!