ಕಾಸರಗೋಡು: ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗ ಭಾರೀ ಅಲೆಗೆ ಸಿಲುಕಿದ್ದ 20 ಮಕ್ಕಳ ರಕ್ಷಣೆ
ಕಾಸರಗೋಡು: ಸಮುದ್ರ ಸ್ನಾನಕ್ಕಿಳಿದ ಇಪ್ಪತ್ತರಷ್ಟು ಮಕ್ಕಳು ಭಾರೀ ಅಲೆಗೆ ಸಿಲುಕಿ ಆಳ ಸಮುದ್ರಕ್ಕೆ ಒಯ್ಯಲ್ಪಟ್ಟು ವಿಷಯ ತಿಳಿದು ಮೀನು ಕಾರ್ಮಿಕರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ಅಪಾಯದಿಂದ ರಕ್ಷಿಸಿದ ಘಟನೆ ಕಾಸರಗೋಡಿನ ಕಡಪ್ಪುರದಲ್ಲಿ ನಡೆದಿದೆ.
ಸೋಮವಾರ ಕಾಸರಗೋಡು ಕಡಪ್ಪುರದ ಬಳಿ ಅಯ್ಯಪ್ಪ ದೀಪೋತ್ಸವ ಕ್ಕೆಂದು ಬಂದಿದ್ದ 12, 13 ಮತ್ತು 14 ರ ಹರೆಯದ ಸುಮಾರು 20ರಷ್ಟು ಮಕ್ಕಳು ಸಮುದ್ರ ತೀರಕ್ಕೆ ತೆರಳಿ ಮೀನು ಕಾರ್ಮಿಕರು ಬಳಸುವ ಕ್ಯಾನ್‌ಗಳನ್ನು ದೇಹಕ್ಕೆ ಕಟ್ಟಿಕೊಂಡು ಸಮುದ್ರಕ್ಕಿಳಿದಿದ್ದರು.
ಆದರೆ ಅದೇ ಹೊತ್ತಿನಲ್ಲಿ ಅಪ್ಪಳಿಸಿದ ಅಲೆ ಮಕ್ಕಳನ್ನು ಎಳೆದೊಯ್ದಿತ್ತು. ಮಕ್ಕಳು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಮೀನು ಕಾರ್ಮಿಕರಾದ ಬಾಬು, ಪುಷ್ಪಾಕರನ್, ಚಿತ್ರಕಾರನ್, ಹರೀಶ್ ಮತ್ತಿತರರು ಕೂಡಲೇ ಸಮುದ್ರಕ್ಕೆ ಹಾರಿ ಹರಸಾಹಸದಿಂದ ಮಕ್ಕಳನ್ನು ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೀನು ಕಾರ್ಮಿಕರ ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭಾವ್ಯ ದುರಂತ ತಪ್ಪಿದೆ. ವಿಷಯ ತಿಳಿದು ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ತಲುಪಿದ್ದರು.




