ಕುಂದಾಪುರ: ಅಜ್ಜ ಸಾವನ್ನಪ್ಪಿದ 2 ಗಂಟೆಯಲ್ಲಿ ಮೊಮ್ಮಗನಿಗೆ ಅಪಘಾತ: ಸಾವಿನಲ್ಲೂ ಜೊತೆಯಾದ ಅಜ್ಜ-ಮೊಮ್ಮಗ
ಕುಂದಾಪುರ: ಅದೊಂದು ಘೋರ ದುರಂತ. ಅಜ್ಜ ಮೊಮ್ಮಗನ ನಡುವೆ ಅತಿಯಾದ ಪ್ರೀತಿ ವಿಶ್ವಾಸ. ಮನೆಯಲ್ಲಿದ್ದಾಗ ಅಜ್ಜ ಮೊಮ್ಮಗ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಆದರೆ ಅದ್ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಅಜ್ಜ ವಯೋಸಹಜ ಸಾವನ್ನಪ್ಪಿದ್ದ ಎರಡೂವರೆ ಗಂಟೆಗಳ ಅಂತರದಲ್ಲಿ ರಸ್ತೆ ಅಪಘಾತದಲ್ಲಿ ಅತೀ ಹಚ್ಚಿಕೊಂಡಿದ್ದ ಮೊಮ್ಮಗ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಕುಂದಾಪುರ ತಾಲೂಕಿನ ಶೇಡಿಮನೆಯಲ್ಲಿ ವಾಸವಿದ್ದ ನಾರಾಯಣ ಪೂಜಾರಿ ನಿವೃತ್ತ ಶಿಕ್ಷಕ. ಅವರ ಮಗಳ ಮಗ ನಿಶಾಂತ ಪೂಜಾರಿ (23) ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ.
ಕಳೆದ ವಾರವಷ್ಟೆ ಊರಿಗೆ ಬಂದಿದ್ದ ನಿಶಾಂತನಿಗೆ ಸೋಮವಾರ ಪರೀಕ್ಷೆ ಇದ್ದಿದ್ದರಿಂದ ಶನಿವಾರ ಸಂಜೆ ಚಾಮರಾಜನಗರಕ್ಕೆ ತೆರಳಿದ್ದ. ಆದರೆ ದುರ್ದೈವವಶಾತ್ ಭಾನುವಾರ ಸಂಜೆ ಆರು ಗಂಟೆ ಸುಮಾರಿಗೆ ನಾರಾಯಣ ಮಾಸ್ಟ್ರು ವಯೋಸಹಜವಾಗಿ ಸಾವನ್ನಪ್ಪುತ್ತಾರೆ. ತಾತನ ಸಾವಿನ ಸುದ್ಧಿ ಕೇಳಿದ ಮೊಮ್ಮಗ ಚಾಮರಾಜನಗರದಿಂದ ಊರಿಗೆ ಬರಲೆಂದು ತನ್ನ ಬೈಕಿನಲ್ಲಿ ಮೈಸೂರಿಗೆ ಬರುತ್ತಿದ್ದ ವೇಳೆ ಸುಮಾರು ರಾತ್ರಿ ಎಂಟೂವರೆ ಸಮಯಕ್ಕೆ ಚಾಮರಾಜನಗರ ತಾಲೋಕು ಪಣ್ಯದಹುಂಡಿ ಬಳಿ ಬೈಕ್ ಅಪಘಾತಗೊಂಡು ಸಾವನ್ನಪ್ಪಿದ್ದಾನೆ. ಅಪಘಾತ ನಡೆದ ಸಂದರ್ಭ ಹೆದ್ದಾರಿಯಲ್ಲಿ ವಾಹನಗಳು ಕಡಿಮೆ ಇದ್ದಿದ್ದರಿಂದ ಸುಮಾರು ಮುಕ್ಕಾಲು ಗಂಟೆಯ ಬಳಿಕ ಜನರಿಗೆ ಗೊತ್ತಾಗಿದೆ ಎನ್ನಲಾಗಿದೆ.
ಬಳಿಕ ನಿಶಾಂತನ ಮೃತ ದೇಹವನ್ನು ಸೋಮವಾರ ಶೇಡಿಮನೆಗೆ ತರಲಾಯಿತು. ಅಜ್ಜ ಮತ್ತು ಮೊಮ್ಮಗನ ದೇಹಗಳನ್ನು ಅಕ್ಕಪಕ್ಜದ ಚಿತೆಗಳನ್ಬು ಜೊತೆಯಾಗಿ ಸುಡಲಾಯಿತು. ಅತೀ ಅಕ್ಕೆರೆಯಿಂದ ಇರುತ್ತಿದ್ದ ತಾತ ಮೊಮ್ಮಗ ಇಬ್ಬರೂ ಸಾವಿನಲ್ಲಿಯೂ ಒಂದಾಗಿರುವುದು ಇಡೀ ಗ್ರಾಮವೇ ದುಃಖದ ಮಡಿಲಿಗೆ ನೂಕಿದೆ.