ಬಂಟ್ವಾಳ: ಒಂದೇ ದಿನ ನಾಪತ್ತೆಯಾಗಿದ್ದ ಯುವಕ-ಯುವತಿ ಕೇರಳದಲ್ಲಿ ಪತ್ತೆ:
ಪೊಲೀಸರ ಮುಂದೆ ಪತ್ತೆಯಾದ ಜೋಡಿ ನೀಡಿದ ಹೇಳಿಕೆ ಏನು ಗೊತ್ತಾ?
ಬಂಟ್ವಾಳ: ಒಂದೇ ದಿನ ಮನೆ ಬಿಟ್ಟು ಹೋಗಿದ್ದ ಅಕ್ಕಪಕ್ಕದ ಮನೆಯ ಯುವಕ ಮತ್ತು ಯುವತಿ ಇಬ್ಬರು ಇದೀಗ ಪೊಲೀಸರಿಗೆ ಕೇರಳ ರಾಜ್ಯದಲ್ಲಿ ಪತ್ತೆಯಾಗಿದ್ದು, ವಾಪಸು ಕರೆದುಕೊಂಡು ಬಂದು ಮನೆಗೆ ಕಳುಹಿಸಿದ ಘಟನೆ ಇಂದು ನಡೆದಿದೆ.
ನ.24 ರಂದು ಶುಕ್ರವಾರ ಮುಂಜಾನೆ ಮನೆಯವರಿಗೆ ಗೊತ್ತಿಲ್ಲದಂತೆ ಪರಾರಿಯಾಗಿದ್ದ ನವಜೋಡಿಗಳು ಕೇರಳ ರಾಜ್ಯದ ಕಾಂಞಗಾಡ್ ಎಂಬಲ್ಲಿ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಸಜೀಪ ಮುನ್ನೂರು ಗ್ರಾಮದ ಉದ್ದೋಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಮಗಳು ಆಯಿಸತ್ ರಸ್ಮಾ (18) ಹಾಗೂ ಹೈದರ್ ಎಂಬವರ ಮಗ ಮಹಮ್ಮದ್ ಸಿನಾನ್ ( 23) ಕಾಣೆಯಾಗಿರುವ ಜೋಡಿಯಾಗಿದ್ದರು.
ಆಸ್ಮಾ ಅವರು ದೇರಳಕಟ್ಟೆ ನಡುಪದವು ಪಿ.ಎ.ಕಾಲೇಜಿನಲ್ಲಿ ಫಾರ್ಮಸಿ ವಿಭಾಗದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು.
ಸಿನಾನ್ ಕೆಲ ವರ್ಷಗಳಿಂದ ಕತಾರ್ ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದ. ಆದರೆ ಇತ್ತೀಚಿಗೆ ಊರಿಗೆ ಮರಳಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ಜೊತೆಗೆ ಇವರು ಇಬ್ಬರು ಒಂದೇ ದಿನ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಹುಡುಕಿಕೊಡುವಂತೆ ದೂರಿನಲ್ಲಿ ತಿಳಿಸಲಾಗಿತ್ತು.
ಆದರೆ ಎರಡು ಮನೆಯವರಿಗೆ ಇವರ ಮಧ್ಯೆ ಪ್ರೇಮ ಪ್ರಣಯದ ವಿಚಾರ ತಿಳಿದಿತ್ತು ಎನ್ನಲಾಗಿದೆ.
ಈ ವಿಚಾರದ ಬಗ್ಗೆ ತಿಳಿದ ಪೋಲೀಸರು ಕಾಣೆಯಾದವರ ಬಗ್ಗೆ ಮಾಹಿತಿ ಕಲೆಹಾಕಿ ಕಾಂಞಗಾಡ್ ನಲ್ಲಿ ಪತ್ತೆ ಮಾಡಿದ್ದಾರೆ.
ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ ಅವರ ನಿರ್ದೇಶನದಂತೆ ಎಸ್.ಐ.ರಾಮಕೃಷ್ಣ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಇರ್ಷಾದ್ ಮತ್ತು ರಾಜೇಶ್ ಕುಲಾಲ್ ಅವರು ಕಾಂಞಗಾಡ್ ನಿಂದ ಪೋಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಇಬ್ಬರು ಅಲ್ಲಿ ಒಟ್ಟಿಗೆ ಇದ್ದು, ನಾವಿಬ್ಬರು ಪ್ರೇಮಿಸುತ್ತಿದ್ದು, ಮದುವೆಯಾಗುವುದಾಗಿ ತಿಳಿಸಿದ್ದಾರೆ.
ಯುವಕ ಮತ್ತು ಯುವತಿಯ ಮನೆಯವರನ್ನು ಠಾಣೆಗೆ ಕರೆಸಿದ ಪೋಲೀಸರು, ಮನೆಯವರೊಂದಿಗೆ ತೆರಳುವಂತೆ ತಿಳಿಸಿದಾಗ ಯುವತಿ ನಾನು ಯುವಕನೊಂದಿಗೆ ಹೋಗುವುದಾಗಿ ತಿಳಿಸಿದ್ದಾಳೆ. ನಾನು ಅವನನ್ನು ಪ್ರೀತಿಸುತ್ತಿದ್ದು, ಇಬ್ಬರು ಮದುವೆಯಾಗುತ್ತೇವೆ ಹಾಗಾಗಿ ಅವನ ಜೊತೆ ಹೋಗುವುದಾಗಿ ತಿಳಿಸಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ.