ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ತಡೆ ವಿರುದ್ಧ ಪ್ರತಿಭಟನೆ
ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ವಿಟ್ಲ ನಿರೀಕ್ಷಣಾ ಮಂದಿರದಿಂದ ವಿಟ್ಲ ನಾಡಕಛೇರಿಯವರೆಗೆ ವಿಟ್ಲ ಪೇಟೆ ರಸ್ತೆ ಅಗಲೀಕರಣ ತಡೆಯ ವಿರುದ್ಧ ಪ್ರತಿಭಟನಾ ಮೆರವಣಿಗೆ ಮಂಗಳವಾರ ನಡೆಯಿತು.
ಸಾಮಾಜಿಕ ಹೋರಾಟಗಾರ ಮುರುವ ಮಹಾಬಲ ಭಟ್ ಮಾತನಾಡಿ ಸ್ವಾತಂತ್ರ್ಯ ಪೂರ್ವದಿಂದಲೇ ಉಪಯೋಗದಲ್ಲಿದ್ದಂತಹ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ೨೦೦ ವರ್ಷದ ಹಿಂದೆ ರೈತರು ಇದೇ ದಾರಿಯನ್ನು ಬಳಸಿಕೊಂಡು ಹೋಗಿ ಬ್ರಿಟೀಷ್ ಸರಕಾರದ ವಿರುದ್ಧ ಆತ್ಮಾರ್ಪಣೆಯನ್ನು ಮಾಡಿದ್ದಾರೆ. ಖಾಸಗೀ ಎಂದು ಹೇಳಿಕೊಂಡು ಅಭಿವೃದ್ಧಿಯನ್ನು ತಡೆಯುತ್ತಿರುವವರು ಜಾಗವನ್ನು ಬಿಟ್ಟಿಕೊಟ್ಟು ರಸ್ತೆ ಅಗಲೀಕರಣವಾಗುವ ಮೂಲಕ ಹತ್ಯೆಯಾದ ೨ ಸಾವಿರ ರೈತರ ಆತ್ಮಕ್ಕೆ ಚಿರಚಾಂತಿಯನ್ನು ನೀಡುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ ವಿಧಾನ ಸಭಾ ಕ್ಷೇತ್ರವನ್ನು ವಿಟ್ಲ ಕಳೆದುಕೊಂಡ ಬಳಿಕ ಪುತ್ತೂರು, ಬಂಟ್ವಾಳ, ಉಳ್ಳಾಲ ಭಾಗಕ್ಕೆ ಜನರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳೇ ನೇರ ಕಾರಣವಾಗಿದ್ದಾರೆ. ವಿಟ್ಲದ ರಾಜಕೀಯ ವ್ಯವಸ್ಥೆ ರಸ್ತೆಯನ್ನು ಮೆಲ್ಕಾರ್ ನಿಂದ ತಿರುಗಿಸಿ ಕಾಂಞಂಗಾಡಿಗೆ ತೆಗೆದುಕೊಂಡು ಹೋಗುವ ಕೆಲಸಕ್ಕೆ ಕೈಹಾಕಿದ್ದಾರೆ. ವಿಟ್ಲ ಪೇಟೆಯನ್ನು ಅಗಲೀಕರಣ ಮಾಡಿ ಹೆದ್ದಾರಿಯನ್ನು ಈ ಮೂಲಕವೇ ತೆಗೆದುಕೊಂಡು ಹೋಗಬೇಕು. ಇದಕ್ಕಾಗಿ ಸರಕಾರ ೫೦ ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಲ್ಲಡ್ಕ – ಸಾರಡ್ಕ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಯ ಗಡಿ ಗುರುತಿಸಿ ಅಕ್ರಮ ಕಟ್ಟಡಗಳನ್ನು ತೆರವು ಮಾಡಬೇಕು. ರಸ್ತೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸಬೇಕೆಂದು ಮುಖ್ಯ ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಪತ್ರವನ್ನುa ಕಂದಾಯ ಇಲಾಖೆಯ ಉಪತಹಸೀಲ್ದಾರ್ ವಿಜಯ ವಿಕ್ರಮ್ ಅವರಿಗೆ ನೀಡಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಪತ್ರವನ್ನು ಕಂದಾಯ ಇಲಾಖೆಯ ಉಪತಹಸೀಲ್ದಾರ್ ವಿಜಯ ವಿಕ್ರಮ್ ಅವರಿಗೆ ನೀಡಿದರು