ಮಿತ್ತಬೈಲ್ ರೇಂಜ್ ನಿಂದ ಡಿ. 2, 3ರಂದು ‘ಮುಸಾಬಖ-2023’ ಕಾರ್ಯಕ್ರಮ
ಬಂಟ್ವಾಳ: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಎಸ್.ಕೆ.ಜೆ.ಎಂ.ಸಿ.ಸಿ. ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮದ್ರಸಗಳ ಪೈಕಿ ಮಿತ್ತಬೈಲ್ ರೇಂಜ್ ವ್ಯಾಪ್ತಿಯಲ್ಲಿ ಬರುವ ಮದ್ರಸಗಳ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ‘ಮುಸಾಬಖ-2023’ ಡಿ. 2 ಮತ್ತು 3ರಂದು ಬಿ.ಸಿ.ರೋಡ್ ಕೈಕಂಬ ಸಮೀಪದ ಪರ್ಲಿಯ ಖಿದ್ಮತುಲ್ ಇಸ್ಲಾಂ ಮದ್ರಸದ ಆವರಣದಲ್ಲಿ ನಡೆಯಲಿದೆ ಎಂದು ‘ಮುಸಾಬಖ’ ಸ್ವಾಗತ ಸಮಿತಿ ಕನ್ವೀನರ್ ಅಬ್ದುಸ್ಸಮದ್ ಅನ್ಸಾರಿ ಹೇಳಿದರು.
ಮಂಗಳವಾರ ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಸಾಬಖ’ ಎಂಬುದು ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ವಿದ್ಯಾರ್ಥಿಗಳ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ವೇದಿಕೆಯಾಗಿದ್ದು, ಕೇರಳ, ಕರ್ನಾಟಕ ಸೇರಿದಂತೆ ಎಸ್.ಕೆ.ಜೆ.ಎಂ.ಸಿ.ಸಿ. ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ರಾಜ್ಯಗಳಲ್ಲೂ ರೇಂಜ್, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ ಎಂದರು.
ಮಿತ್ತಬೈಲ್ ರೇಂಜ್ ಗೆ ಒಳಪಟ್ಟ 21 ಮದ್ರಸಗಳ ಸುಮಾರು 400ಕ್ಕೂ ಮಿಕ್ಕ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರೂ ಕೂಡಾ ಈ ಕಾರ್ಯಕ್ರಮದಲ್ಲಿ ಸ್ಪರ್ಧಾರ್ಥಿಗಳಾಗಿ ಭಾಗವಹಿಸಲಿದ್ದು, ಒಂದು ಪ್ರಧಾನ ವೇದಿಕೆ ಸೇರಿ ಒಟ್ಟು 6 ವೇದಿಕೆಗಳಲ್ಲಾಗಿ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.
ಡಿಸೆಂಬರ್ 2 ರಂದು ಬೆಳಗ್ಗೆ 9 ಗಂಟೆಗೆ ದ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಡಿ. 3ರಂದು ಸಂಜೆ 7ಕ್ಕೆ ನಡೆಯುವ ಸಮಾರೋಪ ಸಂಗಮದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ಮಾನ್ ಫೈಝಿ ತೋಡಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜಯಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಸಾಬಖ ಸ್ವಾಗತ ಸಮಿತಿ ಚೇರ್ ಮೆನ್ ಹಾಜಿ ಮುಹಮ್ಮದ್ ಸಾಗರ್, ಎಸ್.ಕೆ.ಜೆ.ಎಂ. ಮಿತ್ತಬೈಲ್ ರೇಂಜ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಮುಸ್ಲಿಯಾರ್, ಮದ್ರಸಾ ಮ್ಯಾನೇಜ್ ಮೆಂಟ್ ಮಿತ್ತಬೈಲ್ ರೇಂಜ್ ಅಧ್ಯಕ್ಷ ಯೂಸುಫ್ ಬದ್ರಿಯಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.