ಬೆಳ್ತಂಗಡಿ: ವಿದ್ಯುತ್ ಗೆ ಏಣಿ ತಾಗಿ ವ್ಯಕ್ತಿ ಸಾವು: ಮೆಸ್ಕಾಂ ವಿರುದ್ಧ ಸ್ಥಳೀಯರಿಂದ ಆಕ್ರೋಶ
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಮಲ್ಲರ್ಮಾಡಿ ಎಂಬಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿ, ವಿದ್ಯುತ್‌ಶಾಕ್‌ಗೆ ಒಳಗಾಗಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಧರ್ಮಸ್ಥಳ ಗ್ರಾಮದ ಮಲ್ಲರ್ಮಾಡಿ ನಿವಾಸಿ ಬಾಲಕೃಷ್ಣ ಶೆಟ್ಟಿ (46) ಮೃತಪಟ್ಟವರಾಗಿದ್ದಾರೆ. ಅವರು ಇಂದು ಬೆಳಿಗ್ಗೆ ಸ್ಥಳೀಯ ಬೊಮ್ಮಣ್ಣ ಗೌಡ ಎಂಬವರ ಮನೆಗೆ ತೋಟದ ಕೆಲಸಕ್ಕೆ ಹೋಗಿದ್ದು, ತೋಟದಲ್ಲಿ ಸೊಪ್ಪು ಕಡಿಯಲು ಅಲ್ಯೂಮಿನಿಯಂ ಏಣಿಯನ್ನು ಎತ್ತಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ತೋಟದ ನಡುವಿನಲ್ಲಿ ಹಾದುಹೋಗಿದ್ದ ವಿದ್ಯುತ್‌ಲೈನ್‌ಗೆ ತಾಗಿ ವಿದ್ಯುತ್‌ಶಾಕ್ ತಗಲಿದೆ, ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದ ಅವರನ್ನು. ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದರೂ ಆವೇಳೆಗೆ ಅವರು ಮೃತಪಟ್ಟಿದ್ದರು. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೆಸ್ಕಾಂ ಇಲಾಖೆಯ ಅಧಿಕಾರಿಗಳೂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಐದು ,ಆರು ವರ್ಷಗಳಿಂದ ತೋಟದ ಮಧ್ಯೆ ಹಾದು ಹೋಗಿರುವ ವಿದ್ಯುತ್ ಲೈನ್ ಬದಲಾಯಿಸಲು ಮೆಸ್ಕಾಂ , ಡಿಸಿಗೆ ಮನವಿ ಮಾಡಿದ್ದರು. ಇಲ್ಲಿವರೆಗೂ ಮೆಸ್ಕಾಂ ಇಲಾಖೆ ಇದರ ಬಗ್ಗೆ ಗಮನಹರಿಸಿಲ್ಲ. ಅದಲ್ಲದೆ ವಿದ್ಯುತ್ ಲೈನ್ ಹಾದುಹೋಗಿರುವ ತೆಂಗಿನ ಮರ , ಅಡಕೆ ಮರ ಸುಟ್ಟ ಹೋಗುತ್ತಿದೆ. ಇಲ್ಲಿಗೆ ಯಾವ ಮೆಸ್ಕಾಂ ಸಿಬ್ಬಂದಿ ಮರ ,ಗೆಲ್ಲು ಕಡಿಯಲು ಬರುವುದಿಲ್ಲ ಎಲ್ಲವನ್ನೂ ನಾವು ಸರಿಪಡಿಸಬೇಕಾದ ಪರಿಸ್ಥಿತಿ ಇದೆ. ಹಲವು ಮಂದಿಗೆ ವಿದ್ಯುತ್ ಶಾಕ್ ಹೊಡೆದು ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ ಎಂದು ಮೆಸ್ಕಾಂ ವಿರುದ್ದ ಊರವರು ಮಾಧ್ಯಮ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.